ಚಂಡೀಗಢ: ಪಂಜಾಬ್‌ನಲ್ಲಿ ಸಿಖ್ ಕೈದಿಗಳ ಬಿಡುಗಡೆಗೆ ಆಗ್ರಹಿಸಿ ರಾಜ್ಯಪಾಲ ಗುಲಾಬ್ ಚಂದ್ ಕಠಾರಿಯಾ ಅವರ ನಿವಾಸದತ್ತ ಮೆರವಣಿಗೆ ಹೊರಟಿದ್ದ ಪ್ರತಿಭಟನಕಾರರ ಮೇಲೆ ಚಂಡೀಗಢ ಪೊಲೀಸರು ಅಶ್ರುವಾಯು ಶೆಲ್, ಜಲ ಫಿರಂಗಿಯನ್ನು ಶನಿವಾರ ಪ್ರಯೋಗಿಸಿದರು.
ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಲೋಕಭವನದತ್ತ ಸಾಗಲು ಮುಂದಾದಾಗ ಪೊಲೀಸ್ ಈ ಕ್ರಮ ಕೈಗೊಂಡರು.
ಅಲ್ಲದೇ, ಚಂಡೀಗಢ-ಮೊಹಾಲಿ ಗಡಿ ಭಾಗಗಳನ್ನು ಮುಚ್ಚಿ, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸಿಖ್ ಕೈದಿಗಳ ಬಿಡುಗಡೆಗೆ ಆಗ್ರಹಿಸಿ ಕೌಮಿ ಇನ್ಸಾಫ್ ಮೋರ್ಚಾ ಮೆರವಣಿಗೆಗೆ ಕರೆ ನೀಡಿತ್ತು. 'ಬಂಧನದ ಅವಧಿ ಮುಗಿದಿದ್ದರೂ ಹಲವು ಸಿಖ್ ಕೈದಿಗಳು ವಿವಿಧ ಜೈಲುಗಳಲ್ಲಿ ಬಂಧನದಲ್ಲಿದ್ದಾರೆ' ಎಂದು ಮೋರ್ಚಾ ಆರೋಪಿಸಿದೆ.
ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಬಿಯಾಂತ್ ಸಿಂಗ್ ಅವರನ್ನು 1995ರಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಗತಾರ್ ಸಿಂಗ್ ಹವಾರ, ಇತರ ಕೈದಿಗಳಾದ ಬಲವಂತ್ ಸಿಂಗ್ ರಾಜೋನಾ ಮತ್ತು ದೇವೇಂದರ್ ಪಾಲ್ ಸಿಂಗ್ ಬುಲ್ಲರ್ ಅವರನ್ನು ಬಿಡುಗಡೆ ಮಾಡುವಂತೆ ಮೋರ್ಚಾ ಬೇಡಿಕೆಯಿಟ್ಟಿದೆ.

