ನವದೆಹಲಿ: ಸ್ವಾತಂತ್ರ್ಯದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿ 'ಇಂದಿರಾ ಭವನ'ದಲ್ಲಿ 'ವಂದೇ ಮಾತರಂ' ಗೀತೆಯ ಎಲ್ಲಾ ಚರಣಗಳನ್ನು ಶನಿವಾರ ಹಾಡಲಾಯಿತು. ಇದು ಪಕ್ಷದ ನಿಲುವಿಗೆ ವಿರುದ್ಧವಾಗಿದ್ದ ಕಾರಣ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಹಾಡನ್ನು ನಿಲ್ಲಿಸುವಂತೆ ಇಶಾರೆ ಮಾಡಿದರು ಎಂದು ಹೇಳಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು 'ಇಂದಿರಾ ಭವನ'ದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಾಡುಗಾರರು 'ವಂದೇ ಮಾತರಂ' ಸಂಪೂರ್ಣ ಗೀತೆ ಹಾಡಲು ಮುಂದಾದರು. ಅದೇ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಖರ್ಗೆ ಅವರಲ್ಲಿ ಏನನ್ನೋ ಕೇಳಿದರು. ಖರ್ಗೆ ಅವರೂ ಪ್ರತಿಕ್ರಿಯೆಯ ರೂಪದಲ್ಲಿ ಮಾತನಾಡಿದರು. ಆನಂತರ ಕಾರ್ಯಕರ್ತರೊಬ್ಬರು ಮಧ್ಯಪ್ರವೇಶಿಸಿ, ಏನನ್ನೋ ಹೇಳಿದರು. ರಾಹುಲ್ ಗಾಂಧಿ ಅವರು ಅನತಿ ದೂರದಲ್ಲಿ ನಿಂತು ಇದನ್ನು ಗಮನಿಸುತ್ತಿದ್ದರು. ಇಷ್ಟೂ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಅದನ್ನು ಬಿಜೆಪಿಯವರು 'ಟ್ಯಾಗ್' ಮಾಡಿದ್ದು, ಟೀಕೆ ವ್ಯಕ್ತಪಡಿಸಿದ್ದಾರೆ.
'ವಂದೇ ಮಾತರಂ' ಗೀತೆಯ ಎರಡು ಚರಣಗಳನ್ನು ಮಾತ್ರ 'ರಾಷ್ಟ್ರಗೀತೆ' ಎಂದು ಗುರುತಿಸಲಾಗಿತ್ತು. ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕೃತ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದೆ. ಈ ಗೀತೆಯ ಕೊನೆಯ ನಾಲ್ಕು ಚರಣಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಕೆಂಪುಕೋಟೆ ಕಾರ್ಯಕ್ರಮಕ್ಕೆ ಗೈರು:
ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆಸನ ವ್ಯವಸ್ಥೆ ವಿಚಾರದಲ್ಲಿ ಅವಮಾನಿಸಲಾಗಿದೆ ಎಂಬ ಕಾರಣಕ್ಕಾಗಿ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 2025ರಲ್ಲಿಯೂ ಉಭಯ ನಾಯಕರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಹಾಡು ನಿಲ್ಲಿಸಲು ಹೇಳಿಲ್ಲ: ಜೈರಾಮ್ ರಮೇಶ್
ಸೋನಿಯಾ ಅವರು ರಾಷ್ಟ್ರಗೀತೆ 'ವಂದೇ ಮಾತರಂ' ಹಾಡುವುದನ್ನು ನಿಲ್ಲಿಸಲು ಯತ್ನಿಸಿದರು ಎಂಬ ಆರೋಪವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅಲ್ಲಗಳೆದರು. 'ಖರ್ಗೆ ಅವರು ಬಹಳ ಹೊತ್ತಿನಿಂದ ನಿಂತಿದ್ದರಿಂದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಸೋನಿಯಾ ಹೇಳಿದರು' ಎಂದರು. ಕಾಂಗ್ರೆಸ್ ಕಚೇರಿಯಲ್ಲಿ 'ವಂದೇ ಮಾತರಂ' ಪೂರ್ಣ ಗೀತೆಯನ್ನು ಹಾಡಲಾಗಿದೆ ಎಂದು ತಿಳಿಸಿದರು. 'ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯ ಮೇರೆಗೆ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲು 1937ರ ಅಕ್ಟೋಬರ್ 28ರಂದು ನಿರ್ಧರಿಸಲಾಗಿತ್ತು' ಎಂದು ಸ್ಪಷ್ಟನೆ ನೀಡಿದರು.
'ಕೆಲವೊಂದು ಮನಃಸ್ಥಿತಿ ಬದಲಾಗಲ್ಲ'
ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ 'ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡಿದ್ದಕ್ಕೆ ತಾಯಿ ಮಗ ಮತ್ತು ಕಾಂಗ್ರೆಸ್ ಅಧ್ಯಕ್ಷರು ಬೇಸರಗೊಂಡಂತಿದೆ. ಕೆಲವೊಂದು ಮನಃಸ್ಥಿತಿಗಳು ಬದಲಾಗುವುದೇ ಇಲ್ಲ' ಎಂದು ಹರಿಹಾಯ್ದರು. ಬಿಜೆಪಿ ವಕ್ತಾರ ಗೋಪಾಲ ಕೃಷ್ಣ ಅಗರವಾಲ್ 'ಸ್ವಾತಂತ್ರ್ಯ ದಿನದಂದು ಈ ಬೆಳವಣಿಗೆ ನಡೆದಿರುವುದು ನಾಚಿಕೆಗೇಡು. ಈ ಘಟನೆಯು ಕಾಂಗ್ರೆಸ್ ಮನಃಸ್ಥಿತಿಯನ್ನು ಬಹಿರಂಗ ಮಾಡಿದೆ' ಎಂದು ಹೇಳಿದರು.

