ಹಿಂಗೋಲಿ: 'ಸರ್ಕಾರಿ ಶಾಲೆಗಳನ್ನು ಸರ್ಕಾರವು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಬಡ ಮಕ್ಕಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯಿಂದ 'ಶಾಲೆಗಳನ್ನು ಸರಿಪಡಿಸಿ' ಅಭಿಯಾನ ನಡೆಸಲಾಗುವುದು' ಎಂದು ಸಂಘಟನೆ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.
'ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯದ ಕುರಿತು ಕೂಡ ಇದೇ ಮಾದರಿ
ಯಲ್ಲಿ ಹೋರಾಟ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಹಿಂಗೋಲಿ ಜಿಲ್ಲೆಯ ಸ್ವಗ್ರಾಮ ಸಂತೂಕ್ ಪಿಂಪ್ರಿ ಗ್ರಾಮಕ್ಕೆ ತೆರಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿದ್ದಾರೆ.
ಶಾಲೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿದ ದೀಪ್ಕೆ, ಶೌಚಾಲಯಗಳಲ್ಲಿ ನೀರಿನ ಕೊರತೆ, ಮುರಿದ ಕಿಟಕಿಗಳು, ವಿದ್ಯಾರ್ಥಿಗಳಿಗೆ ಬೆಂಚುಗಳ ಕೊರತೆ ಇರುವುದನ್ನು ಗಮನಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 'ಸ್ವಾತಂತ್ರ್ಯ ಬಂದು 80 ವರ್ಷಗಳ ನಂತರವೂ ಸರ್ಕಾರಿ ಶಾಲೆಗಳಲ್ಲಿ ಮೂಲ ಅವಶ್ಯಕತೆಯಾದ ನೀರಿನ ಕೊರತೆಯಿದೆ. ಹೀಗಿದ್ದರೆ, ದೇಶವು ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದರು.
'ಶಾಲೆಗಳಲ್ಲಿ ಮೂಲಸೌಕರ್ಯ ಇದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪರಿಶೀಲನೆ ನಡೆಸಲಿದ್ದೇವೆ. ಮಹಾರಾಷ್ಟ್ರ ಹಾಗೂ ಇಡೀ ದೇಶದಲ್ಲಿ ಈ ಕುರಿತು ಸಮಗ್ರ ದತ್ತಾಂಶ ಸಂಗ್ರಹಿಸಲಿದ್ದೇವೆ. ರಾಜ್ಯದ ಇತರೆ ತಾಲ್ಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ಮುಂದಿನ ಹಂತದಲ್ಲಿ 'ಶಾಲೆಗಳನ್ನು ಸರಿಪಡಿಸಿ' ಅಭಿಯಾನ ನಡೆಸಲಿದ್ದೇವೆ' ಎಂದು ತಿಳಿಸಿದ್ದಾರೆ.
'ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಕಡಿತಗೊಳಿಸಿದೆ. ಸರ್ಕಾರಿ ಶಾಲೆ ಮುಚ್ಚಿದರೆ, ಖಾಸಗಿ ಶಾಲೆಗಳಿಗೆ ಲಾಭವಾಗಲಿದೆ. ಕಳೆದ 10 ವರ್ಷಗಳಲ್ಲಿ ದೇಶದಾದ್ಯಂತ 94 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿವೆ. ಶಾಲೆ ಮುಚ್ಚಿದರೆ, ದೇಶವನ್ನು ಬಲಪಡಿಸಲು ಹೇಗೆ ಸಾಧ್ಯ? ಸರ್ಕಾರಿ ಶಾಲೆಗಳಲ್ಲಿ ಓದಿ ದೊಡ್ಡ ಸಾಧನೆ ಮಾಡಿದರೆ, ಖಾಸಗಿ ಶಾಲೆಗಳಿಗೆ ಯಾರು ಸೇರುತ್ತಾರೆ' ಎಂದು ಅವರು ಪ್ರಶ್ನಿಸಿದ್ದಾರೆ.
ಹೊಸ ಸಂಸತ್ ಭವನ, ಪ್ರಧಾನಿಗೆ ಹೊಸ ಮನೆ ನಿರ್ಮಾಣ ಸಾಧ್ಯವಿದೆ ಗ್ರಾಮೀಣ ಭಾಗದಲ್ಲಿ ಹೊಸ ಶಾಲೆಗಳ ನಿರ್ಮಾಣ ಸಾಧ್ಯವಿಲ್ಲ ಏಕೆ? ಸರ್ಕಾರವನ್ನು ಪ್ರಶ್ನಿಸಿದ ಅಭಿಜಿತ್ ದೀಪ್ಕೆಅಭಿಜಿತ್ ದೀಪ್ಕೆ ಸಿಜೆಪಿ ಸಂಸ್ಥಾಪಕಖಾಸಗಿ ಶಾಲೆಗಳಿಗೆ ಮಕ್ಕಳ ಶುಲ್ಕವಾಗಿ ವಾರ್ಷಿಕ ₹1.5 ಲಕ್ಷ ಪಡೆಯಲಾಗುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ಹೇಗೆ ಸಿಗುತ್ತದೆ? ಹೀಗಾಗಿ ಖಾಸಗಿ ಶಾಲೆಗಳ ಶುಲ್ಕಕ್ಕೆ ಸರ್ಕಾರದ ನಿಯಂತ್ರಣ ಬೇಕು
ಸಿಜೆಪಿ ಇನ್‌ಸ್ಟಾ ಖಾತೆ ಸ್ಥಗಿತ ಮರುಸ್ಥಾಪನೆ
ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿರುವ ಸಿಜೆಪಿ ಅಧಿಕೃತ ಖಾತೆಯು ಶನಿವಾರ ಬೆಳಿಗ್ಗೆ ಕೆಲಕಾಲ ಸ್ಥಗಿತಗೊಂಡಿತ್ತು. ಇದಾದ ಕೆಲಹೊತ್ತಿನಲ್ಲೇ ಮರುಸ್ಥಾಪಿಸಲಾಗಿದೆ. 'ಈ ಕ್ರಮವು ಸ್ವಾತಂತ್ರ್ಯ ದಿನದಂದೇ ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ಇಂತಹ ಹೇಡಿತನದ ಕೃತ್ಯಗಳಿಗೆ ನಾವು ಬಗ್ಗುವುದಿಲ್ಲ' ಎಂದು ಸಿಜೆಪಿ ಪ್ರತಿಕ್ರಿಯಿಸಿದೆ. ಕೆಲಹೊತ್ತಿನ ಬಳಿಕ ಖಾತೆಯನ್ನು ಮರುಸ್ಥಾಪಿಸಲಾಗಿದೆ ಎಂದು ಸಂಘಟನೆಯು ತಿಳಿಸಿದೆ.

