ಅಮೆರಿಕದಲ್ಲಿ ಶಾಶ್ವತವಾಗಿ ನೆಲಸಲು ವೀಸಾ ಪಡೆಯಲು ಕಾಯುತ್ತಿರುವವರಿಗೆ ಟ್ರಂಪ್ ಆಡಳಿತದ ಹೊಸ ತೀರ್ಮಾನದಿಂದ ಸಮಸ್ಯೆ ಎದುರಾಗಿದೆ. ವಿಶ್ವದಾದ್ಯಂತದ ಅಮೆರಿಕದ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳಲ್ಲಿ ನಡೆಯಬೇಕಿದ್ದ ವಲಸೆ ವೀಸಾ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಪ್ರವಾಸಿಗರು, ವಿದ್ಯಾರ್ಥಿಗಳು ಅಥವಾ ಎ-1ಬಿ ಉದ್ಯೋಗಿಗಳಂತಹ ವಲಸಯೇತರ ವೀಸಾಗಳ ವಿಲೇವಾರಿ ಎಂದಿನಂತೆ ನಡೆಯುತ್ತಿದೆ.
ಅಮೆರಿಕ ವೀಸಾ ಸಂದರ್ಶನ ತಾತ್ಕಾಲಿಕ ಸ್ಥಗಿತ: ಭಾರತೀಯರ ಮೇಲೆ ಏನು ಪರಿಣಾಮ?
ಒಂದು ಸಾಲಿನಲ್ಲಿಅಮೆರಿಕದ ವಲಸೆ ವೀಸಾ ಸಂದರ್ಶನಗಳು ಅಧಿಕಾರಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇದು ಭಾರತೀಯ ಅರ್ಜಿದಾರರ ಮೇಲೆ ನೇರ ಪರಿಣಾಮ ಬೀರಿದೆ.
ಅಮೆರಿಕ ವೀಸಾ ಸಂದರ್ಶನಗಳು ಏಕೆ ಸ್ಥಗಿತಗೊಂಡಿವೆ?
ಅಮೆರಿಕದ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳ ಅಧಿಕಾರಿಗಳಿಗೆ ನೀಡಲಾಗುತ್ತಿರುವ ವಿಶೇಷ ತರಬೇತಿಗಾಗಿ ವಲಸೆ ವೀಸಾ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಯಾವ ರೀತಿಯ ವೀಸಾಗಳ ಮೇಲೆ ಪರಿಣಾಮ ಬೀರಿದೆ?
ಕುಟುಂಬ ಆಧಾರಿತ ಮತ್ತು ಉದ್ಯೋಗ ಆಧಾರಿತ ವಲಸೆ ವೀಸಾಗಳ ಮೇಲೆ ಪರಿಣಾಮ ಬೀರಿದೆ. ಆದರೆ ವಿದ್ಯಾರ್ಥಿ, ಪ್ರವಾಸಿ ಮತ್ತು ಎಚ್-1ಬಿ ವೀಸಾಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಈಗಾಗಲೇ ಸಂದರ್ಶನ ನಿಗದಿಪಡಿಸಿಕೊಂಡವರಿಗೆ ಏನು ಸಮಸ್ಯೆ?
ಈಗಾಗಲೇ ದಿನಾಂಕ ಪಡೆದಿದ್ದ ಅರ್ಜಿದಾರರ ಸಂದರ್ಶನಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ನಂತರ ತಿಳಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾರತೀಯರ ಮೇಲೆ ಇದರ ನೇರ ಪರಿಣಾಮವೇನು?
ಅಮೆರಿಕಕ್ಕೆ ಶಾಶ್ವತವಾಗಿ ನೆಲೆಸಲು ಕಾಯುತ್ತಿರುವವರಿಗೆ ಸಂದರ್ಶನ ವಿಳಂಬವಾಗುವುದರಿಂದ ಅಮೆರಿಕಕ್ಕೆ ತೆರಳುವ ದಿನಾಂಕವೂ ಮುಂದೂಡಲ್ಪಡುತ್ತದೆ ಮತ್ತು ಕಾಯುವ ಅವಧಿ ಹೆಚ್ಚಾಗಬಹುದು.
ಈ ತರಬೇತಿ ಪ್ರಕ್ರಿಯೆ ಎಷ್ಟು ದಿನ ನಡೆಯಲಿದೆ?
ಅಮೆರಿಕದ ವಿದೇಶಾಂಗ ಇಲಾಖೆಯು ತರಬೇತಿ ಎಷ್ಟು ದಿನ ನಡೆಯಲಿದೆ ಅಥವಾ ಸಂದರ್ಶನಗಳು ಯಾವಾಗ ಮತ್ತೆ ಪ್ರಾರಂಭವಾಗಲಿವೆ ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
ಸ್ಥಗಿತಗೊಂಡಿದ್ದು ಏನು?
ಅಮೆರಿದಲ್ಲಿ ಶಾಶ್ವತವಾಗಿ ನೆಲಸಲು ಬಯಸುವ ವಿದೇಶಿಗರು ಸಲ್ಲಿಸಿರುವ ವಲಸೆ ವೀಸಾ ಸಂದರ್ಶನಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗುತ್ತಿದೆ. ಅಂದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಇವುಗಳಲ್ಲಿ ಕುಟುಂಬ ಆಧಾರಿತ ವೀಸಾಗಳು ಮತ್ತು ಉದ್ಯೋಗ ಆಧಾರಿತ ವಲಸೆ ವೀಸಾಗಳು ಸೇರಿವೆ. ಅಮೆರಿಕದ ನಾಗರಿಕರ ಕುಟುಂಬ ಸದಸ್ಯರು ಮತ್ತು ಉದ್ಯೋಗದ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವವರ ಮೇಲೆ ಇದರಿಂದ ನೇರ ಪರಿಣಾಮ ಬೀರಲಿದೆ. ಈಗಾಗಲೇ ಸಂದರ್ಶನದ ದಿನಾಂಕ ಪಡೆದಿದ್ದ ಕೆಲವು ಅರ್ಜಿದಾರರಿಗೆ ಅಪಾಯಿಂಟ್‌ಮೆಂಟ್ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕಾನ್ಸುಲೇಟ್‌ಗಳು ಸೂಚಿಸಿವೆ.
ಏಕೆ ಈ ವಿರಾಮ?
ವಿಶ್ವದಾದ್ಯಂತ ಇರುವ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳ ಕಾನ್ಸುಲರ್ ಅಧಿಕಾರಿಗಳಿಗೆ ನೀಡಲಾಗುತ್ತಿರುವ ವಿಶೇಷ ತರಬೇತಿಗಾಗಿ ವಲಸೆ ವೀಸಾ ಸಂದರ್ಶನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎನ್ನುವುದು ಅಮೆರಿಕದ ವಿದೇಶಾಂಗ ಇಲಾಖೆ ನೀಡಿರುವ ಕಾರಣ. ವೀಸಾ ಅರ್ಜಿಗಳನ್ನು ಹೆಚ್ಚು ಸಮಗ್ರವಾಗಿ ಮತ್ತು ಒಂದೇ ರೀತಿಯಲ್ಲಿ ಪರಿಶೀಲಿಸುವುದು ಈ ತರಬೇತಿಯ ಉದ್ದೇಶ. ಅಮೆರಿಕಕ್ಕೆ ಹೋದ ಬಳಿಕ ಅರ್ಜಿದಾರರು ಸರ್ಕಾರದ ನೆರವು ಪಡೆಯುವ ಸಾಧ್ಯತೆ ಇದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಅರ್ಜಿದಾರರ ಆರ್ಥಿಕ ಸ್ಥಿತಿ, ಕುಟುಂಬ ಪರಿಸ್ಥಿತಿ, ಶಿಕ್ಷಣ ಮತ್ತು ಕೌಶಲ್ಯ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ, ಅವರು ಭವಿಷ್ಯದಲ್ಲಿ ಸರ್ಕಾರದ ನೆರವಿನ ಮೇಲೆ ಅವಲಂಬಿತರಾಗುವ ಸಾಧ್ಯತೆ ಇದೆಯೇ ಎಂಬುದನ್ನು ಅಧಿಕಾರಿಗಳು ನಿರ್ಧರಿಸಬಹುದು.
ಆದರೆ ಈ ತರಬೇತಿ ಎಷ್ಟು ದಿನ ನಡೆಯಲಿದೆ, ಮುಂದೂಡಲಾಗಿರುವ ಸಂದರ್ಶನಗಳು ಯಾವಾಗ ಮತ್ತೆ ಆರಂಭವಾಗಲಿವೆ ಎಂಬ ಬಗ್ಗೆ ಇಲಾಖೆ ಇನ್ನೂ ಸ್ಪಷ್ಟಪಡಿಸಿಲ್ಲ
ಅರ್ಜಿದಾರರಿಗೆ ಪರಿಣಾಮವೇನು?
ತಕ್ಷಣದ ಪರಿಣಾಮ ಸಂದರ್ಶನ ವಿಳಂಬ. ಈಗಾಗಲೇ ಸಂದರ್ಶನದ ದಿನಾಂಕ ಪಡೆದಿದ್ದವರಿಗೆ ಹೊಸ ದಿನಾಂಕ ಯಾವಾಗ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಲಸೆ ವೀಸಾ ಪ್ರಕ್ರಿಯೆಯಲ್ಲಿ ಸಂದರ್ಶನ ಪ್ರಮುಖ ಹಂತವಾಗಿರುವುದರಿಂದ, ಅದು ಮುಂದೂಡಿದರೆ ಅಮೆರಿಕಕ್ಕೆ ತೆರಳುವ ದಿನಾಂಕವೂ ಮುಂದಕ್ಕೆ ಹೋಗಬಹುದು. ಕುಟುಂಬದ ಸದಸ್ಯರನ್ನು ಸೇರಿಕೊಳ್ಳಲು ಅಥವಾ ಉದ್ಯೋಗದ ಆಧಾರದಲ್ಲಿ ಅಮೆರಿಕಕ್ಕೆ ತೆರಳಲು ಕಾಯುತ್ತಿರುವವರು ಹೆಚ್ಚು ಕಾಯಬೇಕಾಗಿ ಬರಬಹುದು.
ಈಗಾಗಲೇ ನಿಗದಿಯಾಗಿದ್ದ ಹಲವು ಸಂದರ್ಶನಗಳು ಮುಂದೂಡಲ್ಪಟ್ಟಿರುವುದರಿಂದ, ಹೊಸ ದಿನಾಂಕಗಳನ್ನು ನೀಡುವಾಗ ಅರ್ಜಿದಾರರ ಸಂಖ್ಯೆ ಹೆಚ್ಚಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ಅಪಾಯಿಂಟ್‌ಮೆಂಟ್‌ಗಾಗಿ ಕಾಯುವ ಅವಧಿಯೂ ಹೆಚ್ಚಾಗುವ ಸಾಧ್ಯತೆ ಇದೆ.
ಭಾರತಕ್ಕೆ ಏನು ಪರಿಣಾಮ?
ಭಾರತೀಯರ ಮೇಲೆ ಇದರ ಪರಿಣಾಮ ವೀಸಾ ಪ್ರಕಾರವನ್ನು ಅವಲಂಬಿಸಿರುತ್ತದೆ. ಅಮೆರಿಕದಲ್ಲಿ ಶಾಶ್ವತವಾಗಿ ನೆಲಸಲು ವಲಸೆ ವೀಸಾ ಪಡೆಯುತ್ತಿರುವವರಿಗೆ ನೇರ ಪರಿಣಾಮ ಬೀರುತ್ತದೆ. ಕುಟುಂಬ ಅಥವಾ ಉದ್ಯೋಗದ ಆಧಾರದಲ್ಲಿ ವೀಸಾ ಸಂದರ್ಶನಕ್ಕೆ ಕಾಯುತ್ತಿರುವವರ ಅಪಾಯಿಂಟ್‌ಮೆಂಟ್ ಮುಂದೂಡಲ್ಪಟ್ಟರೆ, ಅಮೆರಿಕ ಪ್ರಯಾಣವೂ ವಿಳಂಬವಾಗಬಹುದು.
ಆದರೆ ವಿದ್ಯಾರ್ಥಿ, ಉದ್ಯೋಗ ಮತ್ತು ಪ್ರವಾಸಿ ವೀಸಾಗಳಿಗೆ ಈ ತಾತ್ಕಾಲಿಕ ಸ್ಥಗಿತ ಅನ್ವಯವಾಗದು. ಎಫ್-1, ಎಚ್-1ಬಿ ಮತ್ತು ಬಿ-1/ಬಿ-2 ಇವುಗಗಳು ವಲಸೆಯೇತರ ವೀಸಾಗಳು.
ಆದರೂ ಭಾರತದಲ್ಲಿನ ಅಮೆರಿಕದ ಕಾನ್ಸುಲೇಟ್‌ಗಳಲ್ಲಿ ಸಂದರ್ಶನದ ಸ್ಲಾಟ್‌ಗಳು ಮತ್ತು ಕಾಯುವ ಅವಧಿ ಬದಲಾಗಬಹುದು. ಆದ್ದರಿಂದ ಅರ್ಜಿದಾರರು ತಮ್ಮ ಕಾನ್ಸುಲೇಟ್‌ನ ಅಧಿಕೃತ ಸೂಚನೆಗಳನ್ನು ಗಮನಿಸುವುದು ಒಳ್ಳೆಯದು.
ಈಗಾಗಲೇ ಅಮೆರಿಕದ ವೀಸಾ ಹೊಂದಿರುವವರಿಗೆ?
ಈ ಕ್ರಮದಿಂದ ಈಗಾಗಲೇ ಮಾನ್ಯವಾಗಿರುವ ವೀಸಾಗಳು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಪ್ರಸ್ತುತ ಕ್ರಮವು ಮುಖ್ಯವಾಗಿ ಹೊಸ ವಲಸೆ ವೀಸಾ ಸಂದರ್ಶನಕ್ಕೆ ಮಾತ್ರ ಸಂಬಂಧಿಸಿದ್ದು. ಹಾಗೆಯೇ, 'ಸರ್ಕಾರದ ನೆರವಿನ ಅವಲಂಬನೆ ಬಾಂಡ್' (Public Charge Bond) ಪ್ರಾಯೋಗಿಕ ಕಾರ್ಯಕ್ರಮವೂ ಈಗಾಗಲೇ ಮಾನ್ಯವಾಗಿರುವ ವೀಸಾಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಮಾನ್ಯ ವೀಸಾ ಹೊಂದಿರುವವರು ಈ ಬೆಳವಣಿಗೆಯನ್ನು ತಮ್ಮ ವೀಸಾ ರದ್ದಾಗಿದೆ ಎಂದು ಭಾವಿಸಕೂಡದು.
ಮುಂದೇನು?
ಮುಖ್ಯ. ಕಾನ್ಸುಲರ್ ಅಧಿಕಾರಿಗಳ ತರಬೇತಿ ಯಾವಾಗ ಮುಗಿಯಲಿದೆ, ಮುಂದೂಡಲಾಗಿರುವ ಸಂದರ್ಶನಗಳಿಗೆ ಹೊಸ ದಿನಾಂಕ ಯಾವಾಗ ಸಿಗಲಿದೆ ಎಂಬುದಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ. ಈಗಾಗಲೇ ಸಂದರ್ಶನದ ದಿನಾಂಕ ಪಡೆದಿದ್ದವರಿಗೆ ಹೊಸ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಇಲಾಖೆ ಹೇಳಿದೆ. ಹೀಗಾಗಿ ಅರ್ಜಿದಾರರು ತಮ್ಮ ಇಮೇಲ್‌ಗಳನ್ನು ಪರಿಶೀಲಿಸುತ್ತಾ, ಸಂಬಂಧಪಟ್ಟ ಅಮೆರಿಕದ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ನ ಅಧಿಕೃತ ಸೂಚನೆಗಳನ್ನು ಗಮನಿಸಬೇಕು.
ಆಧಾರ: ರಾಯಿಟರ್ಸ್, ಫೈನಾನ್ಷಿಯಲ್ ಟೈಮ್ಸ್, ದಿ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಹಾಗೂ ಅಮೆರಿಕದ ವಿದೇಶಾಂಗ ಇಲಾಖೆ.

