ಕಾಸರಗೋಡು: ಪರಿಶಿಷ್ಟ ಜಾತಿ (ಎಸ್ಸಿ) ವಿಭಾಗದ ಸವಲತ್ತು ನಿರಾಕರಣೆ ಹಾಗೂ ಸವಲತ್ತು ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸುವಲ್ಲಿ ವಿ.ಡಿ. ಸತೀಶನ್ ನೇತೃತ್ವದ ರಾಜ್ಯ ಸರ್ಕಾರ ಪಿಣರಾಯಿ ವಿಜಯನ್ ಅವರ ಅದೇ ಹಾದಿಯನ್ನೇ ಮುಂದುವರಿಸಿರುವುದಾಗಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸಿ. ಬಿನೀಶ್ ಮಾಸ್ಟರ್ ತಿಳಿಸಿದ್ದಾರೆ.
ಅವರು ಎಸ್ಸಿ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯು ಬಿಜೆಪಿ ಜಿಲ್ಲಾ ಕಚೇರಿಯಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಿದ್ದ ಮಹಾತ್ಮಾ ಅಯ್ಯಂಕಾಳಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಈಗಾಗಲೇ ವಿದ್ಯಾರ್ಥಿವೇತನ ಮತ್ತು ಇತರ ಸ್ಟೈಪೆಂಡ್ ಸೇರಿದಂತೆ 377 ಕೋಟಿ ರೂ.ಗೂ ಹೆಚ್ಚಿನ ಮೊತ್ತ ವಿತರಿಸದೆ ಬಾಕಿಯಿರಿಸಿಕೊಂಡಿದೆ ಪಿಎಸ್ಸಿ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ಪರಿಶಿಷ್ಟ ಜಾತಿಯ ಹಲವರಿಗೆ ನೇಮಕಾತಿ ಸಿಗದ ಪರಿಸ್ಥಿತಿಯಿದೆ. ಸರ್ಕಾರಿ ಸಂಸ್ಥೆಗಳಲ್ಲಿನ ಎಸ್ಸಿ ಮೀಸಲಾತಿ ಹುದ್ದೆಗಳಲ್ಲಿ ತಾತ್ಕಾಲಿಕ ನೇಮಕಾತಿಗಳನ್ನು ನಡೆಸುವ ಮೂಲಕ ಎಡ ಹಾಗೂ ಐಕ್ಯರಂಗ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ದ್ರೋಹ ಬಗೆಯುತ್ತಾ ಬಂದಿರುವುದಾಗಿ ಬಿನೀಶ್ ಆರೋಪಿಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರು, ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳಿಕ್ಕೂರು, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪಾಡಿ, ಶ್ರೀವಿದ್ಯಾ ಹಾಗೂ ಮಾಜಿ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಸಂಪತ್ ಕುಮಾರ್ ಪೆರ್ಣಡ್ಕ, ಮಾಜಿ ಎಸ್. ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ರಘು ಎಂ. ಉಪಸ್ಥಿತರಿದ್ದರು.



