ಲಖನೌ: ನ್ಯಾಯಾಲಯದ ನಿರ್ದೇಶನದಂತೆ ನೀಡಲಾದ ಭೂಸ್ವಾಧೀನ ಪರಿಹಾರದ ತೀರ್ಪನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಭೂಮಿಯ ಮೌಲ್ಯವನ್ನು 1894ರ ಕಾನೂನಿನ ಬದಲಿಗೆ 2013ರ ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಲೆಕ್ಕಹಾಕಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಕುನಾಲ್ ರವಿ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ನ್ಯಾಯಾಲಯದ ನಿರ್ದೇಶನದಂತೆ ನೀಡಲಾದ ಪರಿಹಾರ ತೀರ್ಪನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಬೈರ್ವಾನ್ ಗ್ರಾಮದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 1894ರ ಭೂಸ್ವಾಧೀನ ಕಾಯ್ದೆಯಡಿ ವಿಶೇಷ ಭೂಸ್ವಾಧೀನ ಅಧಿಕಾರಿಯು 2024ರ ಜನವರಿ 10ರಂದು ಪ್ರಕಟಿಸಿದ್ದ ಪರಿಹಾರದ ತೀರ್ಪು ಪ್ರಶ್ನಿಸಿ ವಾರಣಾಸಿಯ ವಿಜಯ್ ಕುಮಾರ್ ಸೇರಿದಂತೆ ಇತರ 153 ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾರಾಣಸಿ ಅಭಿವೃದ್ಧಿ ಪ್ರಾಧಿಕಾರವು 2000ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು. 2026ರ ಆಗಸ್ಟ್ 7ರಂದು ತನ್ನ ಆದೇಶದಲ್ಲಿ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಸ್ವಾಧೀನ ಅಧಿಕಾರಿಯು ಪರಿಹಾರ ಪ್ರಕಟಿಸಿದ್ದಾರೆ. ಆದ್ದರಿಂದ ಇದರಲ್ಲಿ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ, ರಿಟ್ ಅರ್ಜಿಗಳನ್ನು ವಜಾಗೊಳಿಸಿದೆ.
ಹಿಂದಿನ ಮೊಕದ್ದಮೆಗಳ ಸಮಯದಲ್ಲೂ ಭೂಸ್ವಾಧೀನ ಪರಿಹಾರದ ತೀರ್ಪು ಕುರಿತು ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿತ್ತು. ಆದರೆ, ಅವರು ಅದನ್ನು ಮಾಡಿಲ್ಲ. ಸದ್ಯದ ಮೊಕದ್ದಮೆಯು ನ್ಯಾಯಾಲಯದ ನಿರ್ದೇಶನದ ಅನ್ವಯ ರೂಪಿಸಲಾದ ಪರಿಹಾರ ತೀರ್ಪಿನ ಸವಾಲಿಗೆ ಮಾತ್ರ ಸೀಮಿತವಾಗಿದ್ದು, ಬೇರೆ ಯಾವುದೇ ಆಧಾರಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

