ನವದೆಹಲಿ: 'ಚೀನಾದೊಂದಿಗಿನ ತನ್ನ ಗಡಿಯ ಪರಿಸ್ಥಿತಿಯು ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ' ಎಂದು ಭಾರತ ಮಂಗಳವಾರ ಹೇಳಿದೆ.
ಭಾರತ ಸರ್ಕಾರವು ಅರುಣಾಚಲ ಪ್ರದೇಶದ 27 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಅಧಿಕೃತ ನಕ್ಷೆಯಲ್ಲಿ ಪ್ರಮಾಣಿತ ಹೆಸರುಗಳೊಂದಿಗೆ ಗುರುತಿಸಿರುವುದರ ವಿರುದ್ಧ ಚೀನಾ ಮಾಡಿದ ಟೀಕೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿರಸ್ಕರಿಸಿದೆ. 'ಈ ರಾಜ್ಯವು ಭಾರತದ ಅವಿಭಾಜ್ಯ ಭಾಗವಾಗಿದೆ. ಯಾವುದೇ ಶಕ್ತಿಯೂ ಈ ವಿವಾದಾತೀತ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ದೃಢವಾಗಿ ಪ್ರತಿಪಾದಿಸಿದೆ.
'ಭಾರತ ಹಾಗೂ ಚೀನಾ ನಡುವಿನ ಗಡಿ ಪ್ರದೇಶಗಳಿಗೆ ಸಂಬಂಧಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಚೀನಾದ ಪ್ರತಿನಿಧಿಗಳೊಂದಿಗೆ ನಡೆಸುವ ಚರ್ಚೆಗಳಲ್ಲಿ ಒತ್ತಿ ಹೇಳುತ್ತಾ ಬಂದಿದ್ದೇವೆ. ಗಡಿ ಪರಿಸ್ಥಿತಿಯು ನಮ್ಮ ವಿಶಾಲವಾದ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದೂ ನಾವು ಹೇಳಿದ್ದೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಕಳೆದ ವಾರ ನಡೆದ ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯ ಕಾರ್ಯವಿಧಾನದ ಸಭೆಯಲ್ಲಿ ಈ ವಿಷಯವನ್ನು ಪುನರುಚ್ಚರಿಸಲಾಗಿದೆ. ಸಭೆಯಲ್ಲಿ ಉಭಯ ದೇಶಗಳು ಮುಕ್ತವಾಗಿ ಚರ್ಚೆ ನಡೆಸಿದವು. ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಪರಿಸ್ಥಿತಿಯನ್ನು ಪರಾಮರ್ಶಿಸಿದವು' ಎಂದು ಹೇಳಿದ್ದಾರೆ.

