ಕಾಸರಗೋಡು: ಬಿರುಸಿನ ಮಳೆಯ ಪರಿಣಾಮ ನೀಲೇಶ್ವರ ತೇಜಸ್ವಿನಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಿಯಕ್ಕೇಮುರಿ-ಅಚ್ಚಾಂತುರುತ್ತಿಗೆ ಸಂಪರ್ಕ ಕಲ್ಪಿಸುವ ಕಾಲ್ನಡಿಗೆ ಸೇತುವೆ ಕುಸಿದಿದೆ. ಈ ಸಂದರ್ಭ ಸೇತುವೆ ಮೇಲೆ ಜನಸಂಚಾರವಿಲ್ಲದ ಕಾರಣ ಜೀವಾಪಾಯ ತಪ್ಪಿದೆ.
2008ರಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಕಿಯಕ್ಕೇಮುರಿ ಮತ್ತು ಅಚ್ಚಾಂತುರುತ್ತಿ ದ್ವೀಪವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಪ್ರಸಕ್ತ ಕಾಲ್ನಡಿಗೆ ಸೇತುವೆ ನಿರ್ಮಿಸಲಾಗಿತ್ತು. 2019ರ ಲ್ಲಿಉಂಟಾದ ಪ್ರವಾಹದ ಸಂದರ್ಭ ನೀರಲ್ಲಿ ತೇಲಿಬಂದ ಮರದ ದಿಮ್ಮಿ ಡಿಕ್ಕಿಯಾಗಿ ಸೇತುವೆಹಾನಿಗೀಡಾಗಿದ್ದು, ನಂತರದುರಸ್ತಿಗೊಳಿಸಲಾಗಿತ್ತು. ಸೇತುವೆ ಸಂಪೂರ್ಣ ಕುಸಿದಿರುವುದರಿಂದ ಗ್ರಾಮಸ್ಥರ ಸಂಚಾರಕ್ಕೆ ಭಾರೀ ಸಮಸ್ಯೆ ಎದುರಾಗಿದೆ.
ಈ ಸೇತುವೆ ಕಿಯಕ್ಕೇಮುರಿ, ಕಾರಿಯಲ್, ಪತ್ತಿಕೋಲ್, ಕುಂದಪಡನ್ನ, ಕುಟ್ಟಿವಯಲ್ ಹಾಗೂ ಮೀನ್‍ಕಡವು ಪ್ರದೇಶದ ವಿದ್ಯಾರ್ಥಿಗಳಿಗೆ ಅಚ್ಚಾಂತುರುತ್ತಿ ಎಯುಪಿ ಶಾಲೆ ಮತ್ತು ಕೊಟ್ಟಪುರಂ ಸರ್ಕಾರಿ ವೃತ್ತಿಪರ ಹೈಸ್ಕೂಲ್‍ಗೆ ತೆರಳಲು ಹಾಗೂ ಕುಟುಂಬ ಆರೋಗ್ಯ ಕೇಂದ್ರ ತೆರಳಲು ಪ್ರಮುಖ ಮಾರ್ಗ ಇದಾಗಿದ್ದು, ಸೇತುವೆ ಕುಸಿತದಿಂದ ಇಲ್ಲಿನ ಜನತೆ ಹಲವು ಕಿಲೋಮೀಟರ್ ಸುತ್ತುಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.



