ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಿಂದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ 'ಬೌದ್ಧಿಕ ನಕ್ಸಲರು'(ದಿಮಾಗಿ ನಕ್ಸಲ್) ಎಂಬ ಪದ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕರಾದ ಪಿ.ಚಿದಂಬರಂ, ಜೈರಾಮ್ ರಮೇಶ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಈ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಭಾನುವಾರ ಟೀಕಾಪ್ರಹಾರ ನಡೆಸಿದ್ದಾರೆ.
ಮತ್ತೊಂದೆಡೆ, ಪ್ರಧಾನಿ ಮೋದಿ ಅವರ ಈ ಹೇಳಿಕೆಯನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಯಾರನ್ನೆಲ್ಲಾ ' ಬೌದ್ಧಿಕ ನಕ್ಸಲರು' ಎಂದು ಪರಿಗಣಿಸಬಹುದು ಎಂಬ ವಿವರಣೆ ನೀಡಿದ್ದಾರೆ.
ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ 'ಬುದ್ಧಿಜೀವಿ ನಕ್ಸಲರು' ಎಂಬ ಪದ ಬಳಸಿಲ್ಲ. ದೇಶದಲ್ಲಿ ನಕ್ಸಲರನ್ನು ಬೆಂಬಲಿಸಿದ ಹಾಗೂ ಭಾರತದ ಸಂವಿಧಾನವನ್ನು ತಿರಸ್ಕರಿಸಿದವರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಪ್ರತ್ಯೇಕತಾವಾದಿಗಳ ಜೊತೆ ನಿಂತವರು ಹಾಗೂ ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸುವವರು, ದೇಶದ ಈಶಾನ್ಯ ಭಾಗವನ್ನು ಭಾರತದಿಂದ ಪ್ರತ್ಯೇಕಿಸುವುದಕ್ಕಾಗಿ ಕರೆ ನೀಡಿದವರು ಕೂಡ ಇದೇ ವರ್ಗಕ್ಕೆ ಸೇರುತ್ತಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ, ನಾನು ಬೌದ್ಧಿಕ ನಕ್ಸಲನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ,'ನಾನು ಹಾಗೂ ಎಲ್ಲ ಕಾಕ್ರೋಚ್‌ಗಳು ಬೌದ್ಧಿಕ ನಕ್ಸಲರೇ' ಎಂದು ಪ್ರತಿಕ್ರಿಯಿಸಿದ್ದಾರೆ.

