ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅಭಿವೃದ್ಧಿ ಪಥದತ್ತ ಒಯ್ಯುತ್ತಿದ್ದಾರೆ ಎಂದು ನಂಬುವುದಾದರೆ ನಟರಾದ ವಿವೇಕ್ ಒಬೆರಾಯ್ ಮತ್ತು ಆರ್. ಮಾಧವನ್ ದುಬೈಯಲ್ಲಿ ಯಾಕೆ ವಾಸಿಸುತ್ತಿದ್ದಾರೆ ಎಂದು ಮಹಾರಾಷ್ಟ ನವ ನಿರ್ಮಾಣ ಸೇನೆ (ಎಂಎನ್‌ಎಸ್) ವರಿಷ್ಠ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
ಮುಂಬೈಯಲ್ಲಿ ಶನಿವಾರ ನಡೆದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ವಿದ್ಯಾರ್ಥಿ ಘಟಕದ 20ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತಾವಧಿಯಲ್ಲಿ ಸಾವಿರಾರು ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ವ್ಯವಹಾರಗಳನ್ನು ಮುಚ್ಚಿ ದೇಶ ತೊರೆದಿದ್ದಾರೆ ಎಂದು ಆರೋಪಿಸಿದರು.
ಅನಂತರ ಠಾಕ್ರೆ ಚಿತ್ರರಂಗವನ್ನು ಗುರಿಯಾಗಿರಿಸಿಕೊಂಡು ಅವರು ವಾಗ್ದಾಳಿ ನಡೆಸಿದರು. ಕೆಲವು ನಟರು ಭಾರತಕ್ಕೆ ಆಗಮಿಸಿ 'ಧುರಂಧರ್'ನಂತಹ ಸರಕಾರಿ ಪ್ರಾಯೋಜಿತ ಚಿತ್ರಗಳಲ್ಲಿ ನಟಿಸುತ್ತಾರೆ ಮತ್ತು ದುಬೈಗೆ ಹಿಂದಿರುಗುತ್ತಾರೆ ಎಂದು ಅವರು ಹೇಳಿದರು.
''ಪಿಎಂ ನರೇಂದ್ರ ಮೋದಿ'' ಚಿತ್ರದಲ್ಲಿ ವಿವೇಕ್ ಒಬೆರಾಯ್ ಅವರು ಪ್ರಧಾನಿ ಅವರ ಪಾತ್ರವನ್ನು ನಿರ್ವಹಿಸಿದ್ದರು. ಆದರೂ ಅವರು ದುಬೈಯಲ್ಲಿ ವಾಸಿಸುತ್ತಿದ್ದಾರೆ ! ಮೋದಿ ಅವರ ಕಾಲದಲ್ಲಿ ಎಲ್ಲವೂ ಅಭಿವೃದ್ಧಿ ಹೊಂದುತ್ತಿದೆ ಎಂದು ಮಾತನಾಡುವ ಆರ್. ಮಾಧವನ್ ಅವರು ತಮ್ಮ ಕುಟುಂಬದೊಂದಿಗೆ ದುಬೈಗೆ ಸ್ಥಳಾಂತರಗೊಳ್ಳುತ್ತಾರೆ ಎಂದು ಅವರು ಹೇಳಿದರು.

