ಕುಂಬಳೆ: ಹವಾಮಾನ ವೈಪರೀತ್ಯದಿಂದಾಗಿ ಜ್ವರ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳಿಂದ ರೋಗಿಗಳು ಬಹಳಷ್ಟು ಬಳಲುತ್ತಿರುವಾಗ, ಕುಂಬಳೆ ಬ್ಲಾಕ್ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ, ಕಾರ್ಯನಿರ್ವಹಿಸದ ಒಪಿ ಸಮಯ ವಿವಾದಾಸ್ಪದವಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಇದ್ದ ಒಪಿ ಸಮಯವನ್ನು ಯಾವುದೇ ಮುನ್ಸೂಚನೆ ನೀಡದೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಇಳಿಸಲಾಗಿದೆ.
ಇದು ಚಿಕಿತ್ಸೆ ಪಡೆಯುವ ಸಾಮಾನ್ಯ ರೋಗಿಗಳಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಪರಿಸ್ಥಿತಿಯಲ್ಲಿ ಅಧಿಕಾರಿಗಳ ಈ ಕ್ರಮವು ಜನರ ಆತಂಕವನ್ನು ಹೆಚ್ಚಿಸುತ್ತಿದೆ.
ಸಂಕಷ್ಟದಲ್ಲಿರುವ ಜನ ಸಾಮಾನ್ಯರು:
ಕುಂಬಳೆ ಗ್ರಾಮ ಪಂಚಾಯತಿ ಮಿತಿಯಲ್ಲಿರುವ ಏಕೈಕ ಸರ್ಕಾರಿ ಆರೋಗ್ಯ ಸಂಸ್ಥೆ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರ. ಹಿಂದೆ, ಇದು ಸಮುದಾಯ ಆರೋಗ್ಯ ಕೇಂದ್ರವಾಗಿತ್ತು. ಮೀನುಗಾರರು, ರೈತರು ಮತ್ತು ವಿದ್ಯಾರ್ಥಿಗಳು ಮುಖ್ಯವಾಗಿ ಚಿಕಿತ್ಸೆಗಾಗಿ ಈ ಸರ್ಕಾರಿ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಪ್ರತಿದಿನ 400ಕ್ಕೂ ಹೆಚ್ಚು ರೋಗಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಒಪಿ ನಿರ್ವಹಣಾ ಸಮಯ ಕಡಿಮೆಯಾದ ಕಾರಣ, ಅನೇಕ ರೋಗಿಗಳು ಚಿಕಿತ್ಸೆ ಪಡೆಯದೆ ಹಿಂತಿರುಗಬೇಕಾಗಿದೆ. ಕಾಸರಗೋಡು ಬ್ಲಾಕ್ ಪಂಚಾಯತಿ ಈ ಆಸ್ಪತ್ರೆಯ ಆಡಳಿತ ಜವಾಬ್ದಾರಿ ಹೊಂದಿದ್ದು ಅದರ ಅಪಕ್ವ ನಿರ್ಧಾರ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಕಷ್ಟು ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವುದು ಸಮಯ ಕಡಿಮೆಯಾಗಲು ಕಾರಣ ಎಂದು ಅಧಿಕಾರಿಗಳು ಸೂಚಿಸುತ್ತಾರೆ.
ಕುಟುಂಬ ಆರೋಗ್ಯ ಕೇಂದ್ರ ಎಂದರೇನು?:
ಕುಟುಂಬ ಆರೋಗ್ಯ ಕೇಂದ್ರಗಳು (ಎಫ್.ಎಚ್.ಸಿ.) ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿ.ಎಚ್.ಸಿ) ಮತ್ತಷ್ಟು ಸುಧಾರಿಸುವ ಮೂಲಕ, ಮೂಲಭೂತ ಸೌಲಭ್ಯಗಳನ್ನು ಮತ್ತು ಹೆಚ್ಚಿನ ವೈದ್ಯರ ಸೇವೆಗಳನ್ನು ಒದಗಿಸುವ ಮೂಲಕ ಸಂಜೆ ಒಪಿಡಿ ಸೌಲಭ್ಯ ಒದಗಿಸುವ ಆಧುನಿಕ ವ್ಯವಸ್ಥೆಯಾಗಿದೆ. ಆದಾಗ್ಯೂ, ಕುಂಬಳೆಯಲ್ಲಿ ಹೆಸರನ್ನು ಬದಲಾಯಿಸಲಾಗಿಲ್ಲ ಮತ್ತು ಅಗತ್ಯ ಸೌಲಭ್ಯಗಳನ್ನು ಹೆಚ್ಚಿಸಲಾಗಿಲ್ಲ ಎಂಬ ಪ್ರಬಲ ದೂರು ಸ್ಥಳೀಯರಿಂದ ಕೇಳಿಬಂದಿದೆ.
ಮಧ್ಯಸ್ಥಿಕೆ ಕೋರಿ ಅರ್ಜಿ:
ಮೊಗ್ರಾಲ್ ರಾಷ್ಟ್ರೀಯ ವೇದಿಕೆಯ ಪದಾಧಿಕಾರಿಗಳು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಅವರಿಗೆ ಅರ್ಜಿ ಸಲ್ಲಿಸಿದ್ದು, ಆಸ್ಪತ್ರೆಯ ಕಡಿಮೆ ಸಮಯವನ್ನು ಪುನಃಸ್ಥಾಪಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸಲು ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ವೇದಿಕೆಯ ಅಧ್ಯಕ್ಷ ಸಿದ್ದಿಕ್ ರೆಹಮಾನ್, ಪ್ರಧಾನ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಕುಂಞÂ ಟೈಲ್ಸ್, ಉಪಾಧ್ಯಕ್ಷ ಮುಹಮ್ಮದ್ ಸ್ಮಾರ್ಟ್, ಎಂ. ಮಾಹಿನ್ ಮಾಸ್ತರ್, ಟಿ.ಕೆ. ಜಾಫರ್ ಮತ್ತು ಅಶ್ರಫ್ ಪೆರ್ವಾಡ್ ಅವರು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಆರೋಗ್ಯ ಕೇಂದ್ರದ ದುಸ್ಥಿತಿ ಬಗ್ಗೆ ವಿಜಯವಾಣಿ ಆ.11 ರಂದು ಸಮಗ್ರ ವರದಿ ಪ್ರಕಟಿಸಿತ್ತು. ಇದರ ಬೆನ್ನಿಗೇ ಮೊಗ್ರಾಲ್ ರಾಷ್ಟ್ರೀಯ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.

.jpg)
.jpg)
