ನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಎಲ್ಲ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡುವ ಹೇಳಿಕೆ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
'ಅಮಿತ್ ಶಾ ಅವರ ಉಪದೇಶ ಕೇಳಲು ನಮಗೆ ಆಸಕ್ತಿಯಿಲ್ಲ. ನಾನು 'ನಾವು' ಎಂಬುದನ್ನು ಯುವ ಪೀಳಿಗೆಯನ್ನು ಉದ್ದೇಶಿಸಿ ಹೇಳುತ್ತಿದ್ದೇನೆ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶ ನೀಡಿದವರು ಯಾರು?, ಒಬ್ಬ ವಿದ್ಯಾರ್ಥಿಯ ಕಣ್ಣು ಕಳೆದುಕೊಳ್ಳಲು ಕಾರಣರಾದವರು ಯಾರು ಎಂಬುದರ ಬಗ್ಗೆ ಉತ್ತರ ನೀಡಬೇಕು' ಎಂದು ರಾಹುಲ್ ಒತ್ತಾಯಿಸಿದ್ದಾರೆ.
'ಚೂಪಾದ ಮೊಳೆಗಳಿರುವ ಲಾಠಿಗಳಿಂದ ವಿದ್ಯಾರ್ಥಿಗಳಿಗೆ ಹೊಡೆಯಲು ಆದೇಶಿಸಿದವರು ಯಾರು?, ವಿದ್ಯಾರ್ಥಿಗಳ ಮೇಲೆ ಮೇಲೆ ಗುಂಡು ಹಾರಿಸಲು ಅಮಿತ್ ಶಾ ಅವರು ಆದೇಶ ನೀಡಿದ್ದರೇ?, ಹಾಗೊಂದು ವೇಳೆ ಅವರು ಈ ಆದೇಶ ನೀಡಿದ್ದರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ 20 ದಿನಗಳಿಂದ ಅಮಿತ್ ಶಾ ಅವರು ಕಾಣೆಯಾಗಿದ್ದಾರೆ. ಅವರಿಗೆ ಧೈರ್ಯವಿಲ್ಲ, ಹಾಗಾಗಿ ಸಂಸತ್ತಿಗೆ ಬರುತ್ತಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

