ನವದೆಹಲಿ: ಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿಯ ಹೂಡಿಕೆಗಳ ಬಗ್ಗೆ ಪತ್ರಕರ್ತ ರವಿ ನಾಯರ್ ಅವರು 'ದಿ ವಾಷಿಂಗ್ಟನ್ ಪೋಸ್ಟ್' ನಲ್ಲಿ ಬರೆದಿದ್ದ ಲೇಖನದ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದ ಎಫ್‌ಐಆರ್‌ನ ಆಧಾರದಲ್ಲಿ ಅವರ ನಿವಾಸಗಳಿಗೆ ಪೊಲೀಸರು ದಾಳಿ ನಡೆಸಿ, ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿರುವುದು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಶೋಚನೀಯ ಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಮಾಧ್ಯಮ ಸಂಸ್ಥೆಗಳು ಹೇಳಿವೆ.
ಅಹಮದಾಬಾದ್ ನ್ಯಾಯಾಲಯವು ಹೊರಡಿಸಿದ್ದ ವಾರಂಟ್‌ನಡಿ ಗುಜರಾತ್ ಪೊಲೀಸರು ಮಂಗಳವಾರ ನಾಯರ್ ಅವರ ದಿಲ್ಲಿ ಮತ್ತು ಕೇರಳದಲ್ಲಿಯ ನಿವಾಸಗಳ ಮೇಲೆ ದಾಳಿ ನಡೆಸಿ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಜಪ್ತಿ ಮಾಡಿದ್ದರು.
ನಾಯರ್ ಅವರ ಪುತ್ರ ಮತ್ತು ಅವರ ಸಹೋದ್ಯೋಗಿ ಸಾಚಿ ಹೆಗಡೆ ಅವರಿಗೆ ಸೇರಿದ ಸಾಧನಗಳನ್ನು ಜಪ್ತಿ ಮಾಡಿರುವುದು ತೀವ್ರ ಕಳವಳಕಾರಿ. ನಾಯರ್ ಅವರ ಪುತ್ರ ಮತ್ತು ಸಾಚಿ ಹೆಗಡೆ ಅವರಿಗೆ ಈ ಪ್ರಕರಣ ಅಥವಾ ಪ್ರಕರಣಕ್ಕೆ ಆಧಾರವಾದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೂ ಯಾವುದೇ ಸಂಬಂಧವಿರಲಿಲ್ಲ. ಹೀಗಿದ್ದರೂ ಅವರ ಸಾಧನಗಳನ್ನು ವಶಪಡಿಸಿಕೊಂಡಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು 'ಪ್ರೆಸ್ ಕ್ಲಬ್ ಆಫ್ ಇಂಡಿಯಾ' ಹೇಳಿದೆ.
ಎಫ್‌ಐಆರ್‌ನಲ್ಲಿ ನಾಯರ್ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದ್ದು, ಲೇಖನದ ಸಹಲೇಖಕ ಅಥವಾ ಅಂತಾರಾಷ್ಟ್ರೀಯ ಪತ್ರಿಕೆಯ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದು ಬೆಟ್ಟು ಮಾಡಿರುವ ಅದು, ಸ್ವತಂತ್ರ ಪತ್ರಕರ್ತನಿಗೆ ಇಂತಹ ಕಿರುಕುಳ ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದೆ.
ಪೊಲೀಸರ ಕ್ರಮವನ್ನು ಮಾಹಿತಿಯ ಮೇಲಿನ ನಿಯಂತ್ರಣ ಎಂದು ಬಣ್ಣಿಸಿರುವ ಪ್ರೆಸ್ ಕ್ಲಬ್, ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಅದಕ್ಕಾಗಿ ದೊಡ್ಡ ಬೆಲೆ ತೆರಬೇಕಾಗಿದೆ ಎಂದು ಹೇಳಿದೆ. ಸ್ವತಂತ್ರ ಭಾರತದ ಅಡಿಪಾಯವಾಗಿರುವ ತತ್ವಗಳನ್ನೇ ಕುಸಿಯುವಂತೆ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಪೊಲೀಸರು ಮತ್ತು ಸರಕಾರಿ ಸಂಸ್ಥೆಗಳನ್ನು ಅದು ಆಗ್ರಹಿಸಿದೆ.
ಆರೋಪಿಗಳಲ್ಲದ ವ್ಯಕ್ತಿಗಳ ಸಾಧನಗಳನ್ನು ಜಪ್ತಿ ಮಾಡಿರುವುದು ಇಂತಹ ಕ್ರಮದ ಕಾನೂನು ಆಧಾರ ಮತ್ತು ಅಗತ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಸ್ವತಂತ್ರ ಡಿಜಿಟಲ್ ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರ ಒಕ್ಕೂಟವಾಗಿರುವ 'ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್' ಹೇಳಿದೆ.
ಆರೋಪಿತ ಅಪರಾಧಕ್ಕೆ ಸಂಬಂಧಿಸಿದ ಪುರಾವೆಗಳನ್ನು ಹುಡುಕಲು ನೀಡಲಾದ ಅಧಿಕಾರವನ್ನು ಪ್ರಕರಣಕ್ಕೆ ಸಂಬಂಧಿಸದ ಅಥವಾ ಆರೋಪಿಗಳಲ್ಲದ ವ್ಯಕ್ತಿಗಳ ವೈಯಕ್ತಿಕ ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಲು ಸಿಕ್ಕ ಪೂರ್ಣ ಸಮ್ಮತಿ ಎಂದು ಪರಿಗಣಿಸಬಾರದು ಎಂದೂ ಅದು ತಿಳಿಸಿದೆ.

