ಮುಂಬೈ: ವಿದೇಶಿ ಪ್ರಜೆಗಳು ಗಡಿಗಳಲ್ಲಿ ಅಕ್ರಮವಾಗಿ ನುಸುಳಿ, ಭಾರತದ ಪೌರತ್ವ ಪಡೆಯಲು ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಒಳನುಸುಳುವಿಕೆಯ ತಡೆಗಾಗಿ ಶೀಘ್ರವೇ ಕ್ರಮ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
'ಏಜೆನ್ಸಿಗಳ ನಡುವಣ ಸಮನ್ವಯ ಮತ್ತು ದಾಖಲೆಗಳ ಪರಿಶೀಲನೆಯ ಮಧ್ಯೆ ಅಂತರ ಇರುವುದನ್ನು ಗಮನಿಸಬಹುದು. ಇಂಥ ಪ್ರಕರಣಗಳಲ್ಲಿ ಕೆಲವು ವ್ಯಕ್ತಿಗಳು ದೇಶವಿರೋಧಿ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾರೆ' ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಗಡ್ಕರಿ ಮತ್ತು ಕಮಲ್ ಖಾಟ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 'ಅಕ್ರಮವಾಗಿ ಒಳನುಸುಳಿದವರನ್ನು ಆದ್ಯತೆಯ ಮೇರೆಗೆ ಪತ್ತೆ ಮಾಡಿ, ಗಡಿಪಾರು ಮಾಡಬೇಕಿದೆ' ಎಂದು ಒತ್ತಿಹೇಳಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ, ಗಡಿಪಾರು ಮಾಡಲು ಮತ್ತು ಮತ್ತೊಮ್ಮೆ ದೇಶದ ಒಳನುಸುಳುವುದನ್ನು ತಡೆಗಟ್ಟಲು ತನಿಖಾ ಸಂಸ್ಥೆಗಳಿಗೆ ನೆರವಾಗುವಂತೆ ಆಧಾರ್ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
'ಆಧಾರ್ ಕಾರ್ಡ್‌ಗಳನ್ನು ವಂಚನೆಯ ಮೂಲಕ ಪಡೆಯುವುದು ರಾಷ್ಟ್ರೀಯ ಭದ್ರತೆ ಮತ್ತು ವಲಸೆ ವ್ಯವಸ್ಥೆಗೆ ಗಂಭೀರ ಸವಾಲಾಗಿದೆ. ಇದರ ತಡೆಗಾಗಿ ತುರ್ತು ಹಾಗೂ ಒಮ್ಮತದ ಕ್ರಮದ ಅಗತ್ಯವಿದೆ' ಎಂದು ಆದೇಶದಲ್ಲಿ ತಿಳಿಸಿದೆ.
'ಇಂಥ ಪ್ರಕರಣಗಳ ತನಿಖೆಯು ಗೊತ್ತುಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಈ ಪ್ರಕ್ರಿಯೆಗಳಲ್ಲಿ ಆಗುವ ವಿಳಂಬದಿಂದ ನುಸುಳುಕೋರರು ಪ್ರಯೋಜನ ಪಡೆಯಬಹುದು' ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ಅಫ್ಗಾನಿಸ್ತಾನದ ನಿವಾಸಿ ಮಜೀದ್ ಖಾನ್ ಶಾ ಎಂಬುವವರಿಗೆ ಸಂಬಂಧಿಸಿದ ದಾಖಲೆಯನ್ನು ಹಂಚಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ನಿರ್ದೇಶನ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಈ ಮೇಲಿನ ಆದೇಶವನ್ನು ಹೊರಡಿಸಿದೆ.
ಖಾನ್, ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿ ನೆಲಸಿ, ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಪಡೆದು ಭಾರತೀಯ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

