HEALTH TIPS

ಸಮುದ್ರ ವಾಸಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಅಮೆರಿಕದ ನಾವಿಕರು !

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಸತತ ಏಳು ತಿಂಗಳಿಂದ ನಿಯೋಜಿಸಲಾಗಿರುವ ಅಮೆರಿಕದ 'ಯುಎಸ್‌ಎಸ್‌ ಅಬ್ರಹಾಂ ಲಿಂಕನ್' ಯುದ್ಧವಿಮಾನ ವಾಹಕ ನೌಕೆಯಲ್ಲಿ ಕೆಲವು ನಾವಿಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ದೀರ್ಘ ಕಾಲದಿಂದ ನೌಕೆಯಲ್ಲೇ ಇರುವುದರಿಂದ ಸಿಬ್ಬಂದಿಯ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.


ನಾವಿಕರು, ಸಿಬ್ಬಂದಿ ಸೇರಿ 5 ಸಾವಿರಕ್ಕೂ ಹೆಚ್ಚು ಮಂದಿ ನೌಕೆಯಲ್ಲಿದ್ದು, ಇಷ್ಟು ದೀರ್ಘಕಾಲ ಸಮುದ್ರದಲ್ಲಿ ಇರುವುದು ದಾಖಲೆ.

200 ದಿನಗಳಿಂದ ಬಂದರು ಕಾಣದ ನೌಕೆ

ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌ 2025ರ ನವೆಂಬರ್‌ನಿಂದ ನಿರಂತರವಾಗಿ ಸಮುದ್ರದಲ್ಲಿದ್ದು, 200ಕ್ಕೂ ಹೆಚ್ಚು ದಿನಗಳಿಂದ ಬಂದರಿಗೇ ಬಂದಿಲ್ಲ ಎಂದು ವರದಿಯಾಗಿದೆ. ಸುಮಾರು ಏಳು ತಿಂಗಳ ಅವಧಿಗೆ ನೌಕೆಯ ನಿಯೋಜನೆ ನಿಗದಿಯಾಗಿತ್ತು. ಆದರೆ ಇರಾನ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲಾಗಿದೆ ದೀರ್ಘಾವಧಿಯ ನಿಯೋಜನೆಯಿಂದ ನೌಕೆಯಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ, ಅಗತ್ಯ ವಸ್ತುಗಳ ಕೊರತೆ, ನೀರಿನ ಮಾಲಿನ್ಯ, ಪ್ಲಂಬಿಂಗ್‌ ಸಮಸ್ಯೆಗಳು ಉಂಟಾಗಿದೆ ಎಂಬ ವರದಿಗಳು ಹೊರಬಂದಿವೆ.

ನಾವಿಕರ ಕುಟುಂಬಗಳಿಂದ ಆತಂಕಕಾರಿ ಮಾಹಿತಿ

ನೌಕೆಯಲ್ಲಿರುವ ನಾವಿಕರ ಕುಟುಂಬ ಸದಸ್ಯರು ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ನಾವಿಕರ ಮಾನಸಿಕ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಕನಿಷ್ಠ ಇಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ವರದಿಗಳಿವೆ. ಕಳೆದ ಆಗಸ್ಟ್‌ ಆರಂಭದಲ್ಲಿ ಒಬ್ಬ ನಾವಿಕ ನೌಕೆಯಿಂದ ಸಮುದ್ರಕ್ಕೆ ಬಿದ್ದಿದ್ದು, ಅವರನ್ನು ತಕ್ಷಣವೇ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಘಟನೆ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬುದು ಸಾರ್ವಜನಿಕವಾಗಿ ಸ್ಪಷ್ಟವಾಗಿಲ್ಲ.

ಕುಟುಂಬ ಸದಸ್ಯರು ನೌಕೆಯಲ್ಲಿನ ಆಹಾರ, ನೈರ್ಮಲ್ಯ ವಸ್ತುಗಳು, ಶೌಚಾಲಯ ಮತ್ತು ಇತರ ಮೂಲಸೌಕರ್ಯಗಳ ಬಗ್ಗೆಯೂ ದೂರುಗಳನ್ನು ನೀಡಿದ್ದಾರೆ. ಕೆಲವು ವರದಿಗಳ ಪ್ರಕಾರ, ಸಾಬೂನು, ಡಿಯೋಡರೆಂಟ್‌ ಮತ್ತು ಟೂತ್‌ಪೇಸ್ಟ್‌ನಂತಹ ಅಗತ್ಯ ವಸ್ತುಗಳ ಕೊರತೆಯೂ ಎದುರಾಗಿದೆ.

ಸೆನೆಟರ್‌ಗಳಿಂದ ತನಿಖೆಗೆ ಒತ್ತಾಯ

ನೌಕೆಯ ಪರಿಸ್ಥಿತಿ ಕುರಿತು ಅಮೆರಿಕದ ಡೆಮಾಕ್ರಟಿಕ್‌ ಸೆನೆಟರ್‌ಗಳು ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಅವರಿಂದ ವಿವರಣೆ ಕೇಳಿದ್ದಾರೆ. ಸೆನೆಟರ್‌ ರಿಚರ್ಡ್‌ ಬ್ಲೂಮೆಂಥಾಲ್‌ ಅವರು ನೌಕೆಯಲ್ಲಿನ ಮೂಲಭೂತ ವಸ್ತುಗಳ ಕೊರತೆ, ನೀರಿನ ಮಾಲಿನ್ಯ, ಪ್ಲಂಬಿಂಗ್‌ ಸಮಸ್ಯೆ, ಅಂಚೆ ವ್ಯತ್ಯಯ ಮತ್ತು ಹದಗೆಡುತ್ತಿರುವ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸೆನೆಟರ್‌ ರುಬೆನ್‌ ಗ್ಯಾಲೆಗೊ ಅವರು ದ್ವಿಪಕ್ಷೀಯ ಕಾಂಗ್ರೆಸ್‌ ನಿಯೋಗಕ್ಕೆ ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪ ತಳ್ಳಿಹಾಕಿದ ಹೆಗ್ಸೆತ್‌

ಆದರೆ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ನೌಕೆಯಲ್ಲಿನ ಪರಿಸ್ಥಿತಿ ಕುರಿತು ಬಂದಿರುವ ವರದಿಗಳನ್ನು ತಳ್ಳಿಹಾಕಿದ್ದಾರೆ. ಅವು ಕೃತ್ರಿಮ ಎಂದು ಅವರು ಹೇಳಿದ್ದಾರೆ.

ಪ್ರತಿಯೊಂದು ನೌಕೆ, ಸಿಬ್ಬಂದಿ ಮತ್ತು ಕಮಾಂಡರ್‌ಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ. ನೌಕಾಪಡೆಯ ಅಧಿಕಾರಿಗಳು ಸಿಬ್ಬಂದಿಗೆ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಗಳು ಲಭ್ಯವಿದ್ದು, ನಾವಿಕರ ಕ್ಷಮತೆ ಮತ್ತು ಮಾನಸಿಕ ಸಿದ್ಧತೆಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬದಲಿ ನೌಕೆ ಕಳುಹಿಸಲು ಸಿದ್ಧತೆ

ಈ ನಡುವೆ ಯುಎಸ್‌ಎಸ್‌ ಜಾರ್ಜ್‌ ವಾಷಿಂಗ್ಟನ್ ಯುದ್ಧವಿಮಾನ ವಾಹಕವನ್ನು ಪಶ್ಚಿಮ ಏಷ್ಯಾದತ್ತ ಕಳುಹಿಸಲಾಗುತ್ತಿದೆ. ಈಗಿರುವ ಅಬ್ರಹಾಂ ಲಿಂಕನ್‌ ಹಡಗಿನ ಬದಲು ಇದನ್ನು ಕಳುಹಿಸಲಾಗುತ್ತಿದೆ.

ಮೂಲಗಳು: ರಾಯಿಟರ್ಸ್, ಸಿಎನ್‌ಎನ್, ದಿ ಗಾರ್ಡಿಯನ್ ಹಾಗೂ ದಿ ವಾಲ್ ಸ್ಟ್ರೀಟ್ ಜರ್ನಲ್











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries