ಭಾರತೀಯ ಚುನಾವಣಾ ಆಯೋಗ (ECI) ಪ್ರಕಟಿಸಿದ ಅಂತಿಮ ಫಲಿತಾಂಶದ ಪ್ರಕಾರ, 15 ಸುತ್ತಿನ ಮತ ಎಣಿಕೆ ಬಳಿಕ ಘನಶ್ಯಾಮ್ ಸಿಂಗ್ 66,757 ಮತಗಳನ್ನು ಪಡೆದರೆ, ಅಶುತೋಷ್ ತಿವಾರಿ 60,741 ಮತಗಳನ್ನು ಗಳಿಸಿದರು.
ಈ ಕ್ಷೇತ್ರಕ್ಕೆ ಜುಲೈ 30ರಂದು ಮತದಾನ ನಡೆದಿತ್ತು.
ಡಾಟಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರನ್ನು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು. ಇದರ ಆಧಾರದಲ್ಲಿ ಅವರನ್ನು ಎಪ್ರಿಲ್ ನಲ್ಲಿ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಈ ಕಾರಣದಿಂದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.
ಡಾಟಿಯಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ನರೋತ್ತಮ್ ಮಿಶ್ರಾ ಅವರ ಬದಲಿಗೆ ಅಶುತೋಷ್ ತಿವಾರಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಮಿಶ್ರಾ 2008ರಿಂದ 2018ರವರೆಗೆ ಸತತ ಮೂರು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ, 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಫಲಿತಾಂಶದ ಬಳಿಕ ಮತದಾರರು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಅಶುತೋಷ್ ತಿವಾರಿ ಕೃತಜ್ಞತೆ ಸಲ್ಲಿಸಿದರು. ಜನರು ನೀಡಿರುವ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುವುದಾಗಿ ತಿಳಿಸಿದ ಅವರು, ಪಕ್ಷದ ಸಿದ್ಧಾಂತ ಹಾಗೂ ಸರಕಾರದ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮುಂದುವರಿಸುವುದಾಗಿ ಹೇಳಿದರು.
ಇನ್ನೊಂದೆಡೆ, ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಡಾಟಿಯಾ ಉಪಚುನಾವಣೆಯ ಫಲಿತಾಂಶವು ರಾಜ್ಯದ ಬಿಜೆಪಿ ಸರಕಾರದ ನಿಜವಾದ ಮುಖವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
"ಇದು ಮಧ್ಯಪ್ರದೇಶ ಕಾಂಗ್ರೆಸ್ ತಂಡದ ಸಾಮೂಹಿಕ ಪ್ರಯತ್ನದ ಫಲವಾಗಿದೆ. ರಾಜ್ಯದ ಜನರು ಬದಲಾವಣೆಯ ಪರವಾಗಿ ಸಂದೇಶ ನೀಡಿದ್ದಾರೆ. ನರೋತ್ತಮ್ ಮಿಶ್ರಾ ಸ್ಪರ್ಧಿಸಿದ್ದರೂ ಅವರು ಸೋಲುತ್ತಿದ್ದರು" ಎಂದು ಪಟ್ವಾರಿ ಪ್ರತಿಕ್ರಿಯಿಸಿದರು.

