ಟೆಹರಾನ್: 'ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವೆ ಕಳೆದ ವಾರ ನಡೆದ ರಕ್ಷಣಾ ಒಪ್ಪಂದವು, ಅಮೆರಿಕದ ಕಡೆಗೆ ಈ ದೇಶಗಳ ದೃಷ್ಟಿಕೋನದಲ್ಲಿ ಬದಲಾವಣೆ ಆಗಿರುವುದರ ಸಂಕೇತವಾಗಿದೆ' ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
'ಭದ್ರತೆ ಎಂಬುದು ಸುಳ್ಳು ದಲ್ಲಾಳಿಗಳಿಂದ ಖರೀದಿಸಬಹುದಾದ ವಸ್ತುವಲ್ಲ ಎಂಬುದನ್ನು ಈ ಪ್ರದೇಶದ ದೇಶಗಳು ಅರಿತುಕೊಂಡಿವೆ.
ಹಿಂದಿನಂತೆ ಇನ್ನು ಮುಂದೆ ಈ ದೇಶಗಳು ಅಮೆರಿಕ ಒದಗಿಸುವ ಭದ್ರತೆಯನ್ನು ನಂಬಿ ಕೂರಲು ಸಾಧ್ಯವಿಲ್ಲ' ಎಂದು ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಮೂರು ದೇಶಗಳ ಮಿತ್ರರಾಷ್ಟ್ರವಾದ ಅಮೆರಿಕವನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
'ಈ ಒಪ್ಪಂದವು ಇರಾನ್ ಅನ್ನು ಗುರಿಯಾಗಿಸಿಕೊಂಡಿರಬಹುದು ಎಂಬ ಬಗ್ಗೆ ಇರಾನ್‌ಗೆ ಯಾವುದೇ ಆತಂಕವಿಲ್ಲ. ಈ ಬಗ್ಗೆ ಚಿಂತಿಸಲು ಯಾವುದೇ ಕಾರಣವಿಲ್ಲ' ಎಂದ ಅವರು, ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೊಂದಿಗೆ ಇರಾನ್ ಹೊಂದಿರುವ ಆಳವಾದ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಐದು ತಿಂಗಳ ಯುದ್ಧ ನಡೆಯುತ್ತಿರುವ ಕಾರಣಕ್ಕೆ ಈ ಮೂರು ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದ್ದವು.
'ಮೂರೂ ರಾಷ್ಟ್ರಗಳ ಪೈಕಿ ಯಾವುದೇ ಒಂದು ದೇಶದ ಮೇಲೆ ದಾಳಿ ನಡೆದರೆ, ಅದು ಆ ಎಲ್ಲ ರಾಷ್ಟ್ರಗಳ ಮೇಲೆ ನಡೆದ ದಾಳಿ ಎಂದೇ ಈ ಒಪ್ಪಂದದಡಿ ಪರಿಗಣಿಸಲಾಗುತ್ತದೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿತ್ತು.

