ರಾಂಚಿ(PTI): 'ದೇಶದ ಎಲ್ಲಾ ಜಿಲ್ಲೆಗಳಲ್ಲಿರುವ 1200 ವಿಶ್ವವಿದ್ಯಾಲಯಗಳನ್ನು ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆಯ ವೇದಿಕೆಯನ್ನಾಗಿ ಮಾಡಿಕೊಳ್ಳಲಾಗುವುದು' ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬುಧವಾರ ತಿಳಿಸಿದೆ.
ಈಗಾಗಲೇ ಜಾರ್ಖಂಡ್‌ನಲ್ಲಿ 'ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ವೇದಿಕೆ' ಸಂಘಟನೆಯ ಅಡಿಯಲ್ಲಿ ಕಳೆದ 19 ದಿನಗಳಿಂದ ಸಾವಿರಾರು ವಿದ್ಯಾರ್ಥಿಗಳು ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
'ಸರ್ಕಾರವು ವಿದ್ಯಾರ್ಥಿಗಳ ದನಿಯನ್ನು ಅಡಗಿಸುವ ಬದಲು, ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿ, ಕಠಿಣ ಕ್ರಮ ಜರುಗಿಸಬೇಕು. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು' ಎಂದು ಎಬಿವಿಪಿ ಪ್ರಧಾನ ಕಾರ್ಯದರ್ಶಿ ವೀರೆಂದ್ರ ಸಿಂಗ್ ಸೋಲಂಕಿ ಆಗ್ರಹಿಸಿದ್ದಾರೆ.
'ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ವಿಫಲವಾಗಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಡವಳಿಕೆಯು ನಕಾರಾತ್ಮಕತೆಯಿಂದ ಕೂಡಿದೆ' ಎಂದೂ ಹೇಳಿದ್ದಾರೆ.

