ಮಂಜೇಶ್ವರ: ಮಾರಾಟಕ್ಕೆ ಬಳಸಲಾಗದ ದ್ವಿತೀಯ ದರ್ಜೆಯ ಕೆಂಪು ಕಲ್ಲುಗಳಿಂದ ಕಟ್ಟಿದ ನಾಲ್ಕು ಕಲ್ಲು ಎತ್ತರದ ಅರೆಬರೆ ಗೋಡೆ, ಅದರ ಮೇಲೆ ತೆಂಗಿನ ಸೋಗೆಯ ತಟ್ಟಿ, ಮಳೆ ನೀರು ಸೋಗೆಯ ಮೇಲ್ಪಾವಣಿಯಿಂದ ಸೋರುವುದು ತಪ್ಪಿಸಲು ಅಳವಡಿಸಿದ ಪ್ಲಾಸ್ಟಿಕ್ ಹೊದಿಕೆ, ಮನೆ ಒಳಗೆ ಮತ್ತು ಹೊರಗೆ ಒಂದೇ ಎತ್ತರದ ನೆಲ: ಪಾವೂರು ಗೇರುಕಟ್ಟೆ ಹಳೇ ಶ್ರೀಗಂಧ ಫ್ಯಾಕ್ಟರಿ ಸಮೀಪ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬವೊಂದರ ಸಂಕಷ್ಟದ ಬದುಕಿನ ಕಥೆ ಇದು. ಈ ಮನೆಗೆ ವಿದ್ಯುತ್ ಇಲ್ಲ, ಪಡಿತರ ಚೀಟಿಯೂ ಇಲ್ಲ, ಯಾವುದೇ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದೆ ಈ ಕುಟುಂಬ.
ಈ ಮನೆಯಲ್ಲಿ ಜೆಮ್ಮಿ ಕೊನಾರಿಯೊ, ಅವರ ಹೆಂಡತಿ ಲೀಲಾ ಕೊನಾರಿಯೋ, ಪುತ್ರ ಜಿತೇಶ್ ಒಟ್ಟು ಮೂವರು ವಾಸಿಸುತ್ತಿದ್ದಾರೆ. ಸುತ್ತಲು ಎತ್ತರದ ಮರಗಳು ಇರುವುದರಿಂದ ಈ ಮನೆ ಎಂದು ಗುರುತಿ ಸಲಾಗಿರುವ ಶಿಥಿಲಾವಸ್ಥೆಯ ಕಟ್ಟಡ ಇನ್ನೂ ಉಳಿದುಕೊಂಡಿದೆ.
ಆಧಾರ್ ಕಾರ್ಡೂ ಇಲ್ಲ!:
ಮನೆಯಲ್ಲಿರುವ ಪತಿ, ಪತ್ನಿ ಹಾಗೂ ಅವರ ಪುತ್ರ ಮೂವರಲ್ಲಿ ಯಾರೊಬ್ಬರ ಬಳಿಯೂ ಆಧಾರ್ ಕಾರ್ಡ್ಗಳು ಇಲ್ಲ. ಶೌಚಾಲಯ, ಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಮೊಂಬತ್ತಿ ಬೆಳಕಿನಲ್ಲೇ ರಾತ್ರಿ ಕಳೆಯಬೇಕು. ಜೋರು ಮಳೆ-ಗಾಳಿ ಇದ್ದರೆ ಜೆಮ್ಮಿ ಅವರು ತನ್ನ ಪತ್ನಿ, ಪುತ್ರನ ಜತೆಗೆ ರಾತ್ರಿ ಸ್ವಲ್ಪ ದೂರದಲ್ಲಿ ಇರುವ ಅತ್ತೆ ಮನೆಗೆ ತೆರಳುತ್ತಾರೆ. ಪಡಿತರ ಕಾರ್ಡು, ಅಡುಗೆ ಅನಿಲ ಸಂಪರ್ಕ ಇಲ್ಲ. ಈ ಕಾಲದಲ್ಲೂ ಮನೆಯಲ್ಲಿ ಒಂದು ಮೊಬೈಲ್ ಕೂಡ ಇಲ್ಲ. ಮನೆಯವರನ್ನು ಸಂಪರ್ಕಿಸುವವರು ಮನೆಗೆ ನೇರ ಭೇಟಿ ನೀಡಬೇಕು. ಜೆಮ್ಮಿ ಕುಟುಂಬದಲ್ಲಿ ಇರುವ ಏಕೈಕ ದಾಖಲೆ ಮತದಾನದ ಗುರುತು ಚೀಟಿ ಮಾತ್ರ.
ಅಳಿದುಳಿದ ಕುಟುಂಬದ ಸದಸ್ಯ:
ಜೆಮ್ಮಿ ಅವರ ತಂದೆ ಇಝುಬು. ತಾಯಿ ಸಿಸಿಲಿಯಾ. ಇದೇ ಭೂಮಿಯಲ್ಲಿ ಈ ಹಿಂದೆ ನೆಲೆಸಿದವರು. ಇವರದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಕೊರಗ ಕುಟುಂಬ. ತಂದೆ, ತಾಯಿ, ಇಬ್ಬರು ಅಕ್ಕಂದಿರು, ಓರ್ವ ತಮ್ಮ ನನಗೆ ಮೂರು ವರ್ಷದಲ್ಲಿ ಇರುವಾಗಲೇ ತೀರಿಕೊಂಡರು. ಬಳಿಕ ಅಜ್ಜ ಉಪ್ಪಿನಂಗಡಿಯಲ್ಲಿರುವ ಮನೆಗೆ ಕೊಂಡೊಯ್ದು ನನ್ನನ್ನು ಸಾಕಿದರು. ಏಳು ವರ್ಷ ಹಿಂದೆ ವಾಪಸ್ ಇಲ್ಲಿ ಬಂದು ಇದ್ದ ನಮ್ಮ ಜಾಗದಲ್ಲಿ ನಿಂತು ಕುಟುಂಬ ಜತೆಗೆ ವಾಸವಿದ್ದೇನೆ. ಇಬ್ಬರು ಅಕ್ಕಂದಿರು, ತಮ್ಮ ಸಾವನ್ನಪ್ಪಿದ್ದಾರೆ.
ಆದಾಯವಿಲ್ಲದ ಬರಡು ಭೂಮಿ:
ಜೆಮ್ಮಿ ಅವರ ಹೆಸರಿನಲ್ಲಿ 1.80 ಎಕರೆ ಜಮೀನು ಇದೆ. ಆದರೆ, ಕೃಷಿಗೆ ಅಗತ್ಯವಾದ ನೀರಿಲ್ಲದೆ ಈ ಭೂಮಿ ಬರಡಾಗಿದೆ. ಪಂಚಾಯತಿಯ ಕುಡಿಯುವ ನೀರೊಂದೇ ಈ ಕುಟುಂಬಕ್ಕೆ ಲಭಿಸಿರುವ ಸರ್ಕಾರಿ ಸವಲತ್ತು! ಪಡಿತರ ಕಾರ್ಡು ಇಲ್ಲದೆ ರೇಶನ್ ಕೂಡ ಲಭಿಸುತ್ತಿಲ್ಲ. ಅಂಗಡಿಯಿಂದ ಪೂರ್ಣ ದುಡ್ಡು ಕೊಟ್ಟು ಎಲ್ಲವನ್ನೂ ಖರೀದಿಸಬೇಕು. ಈಗ 37 ವರ್ಷ ಪ್ರಾಯವಿರುವ ಜೆಮ್ಮಿ ಹಿಂದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರಂತೆ. ಈಗ ಜೋಪಡಿಯ ಕತ್ತಲಲ್ಲೇ ಕುಳಿತು ಒಣಗಿದ ಬಳ್ಳಿಯಲ್ಲಿ ಕುಡುಪು (ಅನ್ನ ಬಸಿಯುವ ತಟ್ಟೆ) ಹೆಣೆಯುತ್ತಾರೆ. ಅವರ ಪತ್ನಿ ಲೀಲಾ ಗಂಡನಿಗೆ ಕಡುಪು ಹೆಣೆಯಲು ಅಗತ್ಯ ಬಳ್ಳಿ ಸಂಗ್ರಹಿಸಲು ನೆರವಾಗುತ್ತಾರೆ.
ಒಂದು ಕುಡುಪು ಹೆಣೆದು ಮಂಜೇಶ್ವರ ಪೇಟೆಗೆ ಕೊಂಡುಹೋದರೆ 35- 40 ರೂ. ಸಿಗುತ್ತದೆ. ಮಂಗಳೂರಿಗೆ ಕೊಂಡು ಹೋದರೆ 10 ರೂ. ಅಧಿಕ ಸಿಗುತ್ತದೆ ಎನ್ನುತ್ತಾರೆ ಜೆಮ್ಮಿ.
ಸೌಲಭ್ಯಗಳಿದ್ದರೂ ಇವರಿಗೆ ಯಾವುದೂ ಲಭಿಸುತ್ತಿಲ್ಲ. ಇವರದು ಕೊರಗ ಸಮುದಾಯ, ಕೇರಳದಲ್ಲಿ ಕೊರಗ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಇವರಿಗೆ ಕೇಂದ್ರ, ಕೇರಳ ಸರ್ಕಾರಗಳು ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತವೆ. ಆದರೆ ದಾಖಲೆಗಳಿಲ್ಲದೆ ಯಾವ ಸೌಲಭ್ಯವೂ ಇವರಿಗೆ ತಲುಪುತ್ತಿಲ್ಲ, ಎಸ್.ಟಿ ಪ್ರಮೋಟರ್, ಕೆಲವು ಇಲಾಖೆ ಅಧಿಕಾರಿಗಳು ಕೂಡ ಈ ಕುಟುಂಬಕ್ಕೆ ನೆರವಾಗಲು ಸಾಕಷ್ಟು ಶ್ರಮಿಸಿದ್ದರೂ ಸಾಧ್ಯವಾಗಿಲ್ಲ. ಕೆಲವು ವಿಚಾರದಲ್ಲಿ ಕುಟುಂಬದ ಆಸಹಕಾರವೂ ಇದೆ. ಈ ಕುಟುಂಬವನ್ನು ರಕ್ಷಿಸಲು ಸಮಾಜ, ಸಾಮುದಾಯಿಕ ಸಂಘಟನೆಗಳ ಬೆಂಬಲವೂ ಅಗತ್ಯ ಬೇಕಾಗಿದೆ.
ರಕ್ಷಣೆ ಕೊರತೆ, ಅಪೌಷ್ಟಿಕತೆ ಸಮಸ್ಯೆ :
1ನೇ ಕ್ಲಾಸಿನಲ್ಲಿ ಓದುವ ಮಗನೊಂದಿಗೆ ಇರುವ ಕುಟುಂಬಕ್ಕೆ ಮನೆಯಲ್ಲಿ ಯಾವುದೇ ರಕ್ಷಣೆ ಇಲ್ಲ, ಕಾಡು ಪೊದೆ, ಹುಲ್ಲು ಮನೆ ಬುಡ ತನಕ ವ್ಯಾಪಿಸಿದೆ. ಕಾಡು ಹಂದಿ, ಜಿಂಕೆ ಸಹಿತ ಕೆಲವು ಪ್ರಾಣಿಗಳನ್ನು ಜಮೀನಿನಲ್ಲಿ ಕಂಡಿರುವುದಾಗಿ ಹೇಳುತ್ತದೆ ಕುಟುಂಬ. ಈ ದಂಪತಿ ಕೂಡ ಆರೋಗ್ಯದಿಂದ ಇರುವಂತೆ ಕಾಣುತ್ತಿಲ್ಲ, ಕೈತವಾದ ದೇಹ, ಅಪೌಷ್ಟಿಕತೆ ಎದ್ದು ಕಾಣುವ ಲಕ್ಷಣ.
ಆಧಾರ್ ಮಾಡಿಸಲು ಪ್ರಯತ್ನ:
ಅಪ್ಪ ಮತ್ತು ಅಮ್ಮನಲ್ಲಿ ಯಾವುದೇ ದಾಖಲೆಗಳು ಇಲ್ಲದ ಕಾರಣ ಕಷ್ಟಪಟ್ಟು ಓಡಾಡಿ ಚಿಮ್ಮಿ ಅವರ ಪುತ್ರ ಜಿನೇಶ್ ನನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಸೇರಿಸಲಾಗಿದೆ. ಜೆಮ್ಮಿ ಅವರ ಪತ್ನಿ ಲೀಲಾ ಅವರಿಗೆ ಆಧಾರ್ ಮಾಡಿಸುವ ಪ್ರಯತ್ನ ಪ್ರಗತಿಯಲ್ಲಿದೆ ಎನ್ನುತ್ತಾರೆ ಎಸ್ಟಿ ಪ್ರಮೋಟರ್
ಕೋಟ್ಸ್:
ದಾಖಲೆಗಳಿಲ್ಲದಿರುವುದು ತೊಂದರೆ:
ಜಿಮ್ಮಿ ಕುಟುಂಬ ಸದಸ್ಯರಲ್ಲಿ ಜನನ ದೃಡೀಕರಣ, ಅಧಾರ್ ಸಹಿತ ಯಾವುದೇ ಅಧಿಕೃತ ದಾಖಲೆಗಳು ಇಲ್ಲದಿರುವುದು ಅವರಿಗೆ ಸರ್ಕಾರದ ಯೋಜನೆಗಳನ್ನು ಒದಗಿಸುವಲ್ಲಿ ಸಮಸ್ಯಾತ್ಮಕವಾಗಿರುವ ಇರುವ ಮುಖ್ಯ ಸಮಸ್ಯೆ, 18 ವರ್ಷ ಕಳೆದವರಿಗೆ ಹೊಸ ಆಧಾರ್ ಮಾಡಿಸುವ ಪ್ರಕ್ರಿಯೆ ತುಂಬಾ ತಷ್ಟ ಇದೆ. ಮನೆಯ ಮೂವರು ಸದಸ್ಯರಿಗೆ ಆಧಾರ್ ಒದಗಿಸುವ ಪ್ರಯತ್ನ ಪ್ರಗತಿಯಲ್ಲಿದೆ.
-ವೀಣಾ
ಟ್ರೈಬಲ್ ಅಧಿಕಾರಿ.
ಹೈಲೈಟ್ಸ್:
-ಮಂಜೇಶ್ವರದಲ್ಲಿದೆ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಕೊರಗ ಕುಟುಂಬ
-ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಂಕಷ್ಟ
-ಪ್ಲಾಸ್ಟಿಕ್ ಹಾಸಿದ ಮನೆಯೊಂದೇ ಆಶ್ರಯ.
- ಯಾವುದೇ ಇಲಾಖೆಯ ಕಣ್ಣಿಗೆ ಕಾಣಿಸದ ನಿರ್ಗತಿಕ ಕುಟುಂಬ
- ಆಧಾರ್, ರೇಶನ್ ಸಹಿತ ಯಾವುದೇ ಮೂಲ ದಾಖಲೆಗಳಿಲ್ಲ.
- ದಾಖಲೆಗಳಿಲ್ಲದ ಕಾರಣ ಭಾರೀ ಸಂಕಷ್ಟದಿಂದ ಬಾಲಕನನ್ನು ಶಾಲೆಗೆ ದಾಖಲು.

.jpg)
.jpg)
