ನವದೆಹಲಿ: ಥೈಲ್ಯಾಂಡ್‌ನ ಫುಕೆಟ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದಾಗ ಗಾಳಿಯಲ್ಲಿ ಗಿರಕಿ ಹೊಡೆದ ಘಟನೆಗೆ ಸಾಕ್ಷಿಯಾದ ಏರ್ ಇಂಡಿಯಾ ವಿಮಾನದ ಪೈಲಟ್ ನಿದ್ರಾಹೀನತೆಯ ಸಮಸ್ಯೆಗಾಗಿ ಔಷಧಿ ಸೇವಿಸುತ್ತಿದ್ದನೆಂದು, ವಾಯುಯಾನಸಂಸ್ಥೆಯ ಆಂತರಿಕ ವಿಮಾನ ಸುರಕ್ಷತಾ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಕರ್ತವ್ಯದಿಂದ ಬಿಡುವು ದೊರೆತಾಗ ತನಗೆ ನಿದ್ರೆಯು ಬರುತ್ತಿರಲಿಲ್ಲವಾದ ಕಾರಣ ತಾನು ಔಷಧಿಯನ್ನು ಸೇವಿಸುತ್ತಿದ್ದುದಾಗಿ ಆತ ಹೇಳಿರುವುದಾಗಿ ವರದಿ ತಿಳಿಸಿದೆ. ಪೈಲಟ್‌ನನ್ನು ಎರಡು ಬಾರಿ ಡ್ರಗ್ಸ್ ಸೇವನೆ ತಪಾಸಣೆಗೊಳಪಡಿಸಿದ ಸಂದರ್ಭ ಆತ ಮಾದಕದ್ರವ್ಯವನ್ನು ಸೇವಿಸಿರುವುದು ಕೂಡ ದೃಢಪಟ್ಟಿತ್ತು.
ಆಗಸ್ಟ್ 4ರಂದು 137 ಪ್ರಯಾಣಿಕರು ಹಾಗೂ ಎಂಟು ಮಂದಿ ಸಿಬ್ಬಂದಿಯನ್ನು ಹೊತ್ತ ಎಐ-2379 ವಿಮಾನವು ಥೈಲ್ಯಾಂಡ್‌ನ ಫುಕೆಟ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದಾಗ ಒಡಿಶಾದ ಆಗಸದಲ್ಲಿ ಹಾರಾಡುತ್ತಿದ್ದಾಗ ಹಠಾತ್ತನೇ ಗಾಳಿಯ ಒತ್ತಡಕ್ಕೆ ಒಳಗಾಗಿ ಗಿರಕಿ ಹೊಡೆದು, 300 ಅಡಿ ಕೆಳಗೆ ಕುಸಿದಿದೆ. ಘಟನೆಯಲ್ಲಿ ಕನಿಷ್ಠ 20 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿಗೆ ಗಾಯಗಳಾಗಿದ್ದವು. ಆನಂತರ ವಿಮಾನವು ಸುರಕ್ಷಿತವಾಗಿ ದಿಲ್ಲಿಯಲ್ಲಿ ಬಂದಿಳಿದಿತ್ತು.
ವಿಮಾನವು ಒಡಿಶಾದ ಮೇಲಿನ ಆಗಸದಲ್ಲಿ 300 ಅಡಿ ಕೆಳಗೆ ಕುಸಿದಾಗ ಪೈಲಟ್ ಸೀಟ್‌ನಲ್ಲಿ ಕುಳಿತಿರಲಿಲ್ಲ. ಆತನ ಬದಲಿಗೆ ಸಹ-ಪೈಲಟ್ ಕಾರ್ಯ ನಿರ್ವಹಿಸುತ್ತಿದ್ದನೆಂದು ವರದಿ ತಿಳಿಸಿದೆ. ಘಟನೆಯ ಆನಂತರ ಪೈಲಟ್, ಕ್ಯಾಬಿನ್‌ಗೆ ಬಂದು ಗಾಯಾಳು ಪ್ರಯಾಣಿಕರನ್ನು ವಿಚಾರಿಸಿದ. ಆನಂತರ ತನ್ನ ಅಥವಾ ವಿಮಾನದ ದೃಶ್ಯೃಗಳನ್ನು ಚಿತ್ರೀಕರಿಸದಂತೆ ಪ್ರಯಾಣಿಕರಿಗೆ ಸೂಚಿಸಿದ್ದನೆನ್ನಲಾಗಿದೆ.
ವಿಮಾನವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕವೂ ಆತ ನಡೆದಾಡುವಾಗ ಆತನಿಗೆ ಕಾಲುಗಳ ಮೇಲೆ ನಿಯಂತ್ರಣವಿರಲಿಲ್ಲವೆಂದು ವರದಿ ತಿಳಿಸಿದೆ.

