ಚೆನ್ನೈ: ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ 'ವೆಟ್ರಿ ಪಯಣಂ' ಯೋಜನೆಯನ್ನು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಜಾರಿಗೊಳಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಘೋಷಿಸಿದರು.
ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಡಿಲಕ್ಸ್, ಎಲ್‌ಎಸ್‌ಎಸ್ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿಯೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಗೆ ವಾರ್ಷಿಕ ₹6,000 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ನೀಡಿದ್ದ ಪ್ರಮುಖ ಭರವಸೆಗಳನ್ನು ಕಾರ್ಯಗತಗೊಳಿಸುವುದಾಗಿ ವಿಜಯ್ ಅವರು ವಿಧಾನಸಭೆಯಲ್ಲಿ ಘೋಷಿಸಿದರು.
'ಅನ್ನಪೂರ್ಣಿ ಸೂಪರ್ ಸಿಕ್ಸ್' ಯೋಜನೆಯಡಿ ರಾಜ್ಯದ ಪ್ರತಿ ಅರ್ಹ ಕುಟುಂಬಕ್ಕೆ ವಾರ್ಷಿಕ 6 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ₹2.5 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು, ವಿಕಲಚೇತನರು, ಆರ್ಥಿಕವಾಗಿ ಹಿಂದುಳಿದವರು, ಸಣ್ಣ ಮತ್ತು ಮಧ್ಯಮ ರೈತ ಕುಟುಂಬಗಳು ಸೇರಿ ಒಟ್ಟು 1.30 ಕೋಟಿ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿವೆ. ಇದಕ್ಕಾಗಿ ವಾರ್ಷಿಕ ₹4,000 ಕೋಟಿ ಕೋಟಿ ವೆಚ್ಚವಾಗಲಿದೆ. 2027ರ ಜನವರಿಯಿಂದ ಯೋಜನೆ ಆರಂಭವಾಗಲಿದೆ' ಎಂದರು.
ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5ನೇ ಟರ್ಮಿನಲ್ ಅನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ ಎಂದೂ ತಿಳಿಸಿದರು.

