ಸೋಫಿಯಾ: ರೊಮೇನಿಯಾದ ಗಡಿ ದಾಟಿ ಬಲ್ಗೇರಿಯಾದ ವಾಯುಪ್ರದೇಶ ಪ್ರವೇಶಿಸಿದ್ದ ಉಕ್ರೇನ್ ದೇಶದ ಡ್ರೋನ್ ಇಲ್ಲಿನ ಅಂತರರಾಷ್ಟ್ರೀಯ ಅನಿಲ ಪೈಪ್‌ಲೈನ್ ಸಮೀಪ ಸ್ಫೋಟಗೊಂಡಿದೆ. ಇದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿ ಉಂಟಾಗಿಲ್ಲ.
ರಷ್ಯಾವು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಕೈಗೊಂಡ ಬಳಿಕ ನ್ಯಾಟೊ ವಾಯುಪ್ರದೇಶದಲ್ಲಿ ಡ್ರೋನ್‌ಗಳು ಹಾರಾಡುವುದು ಮಾಮೂಲಿಯಾಗಿದೆ.
'ಉಕ್ರೇನ್‌ನ ಸೇನೆಯು ಬಳಸುವ ಡ್ರೋನ್‌ಗಳು ಬಲ್ಗೇರಿಯಾದ ವಾಯುಪ್ರದೇಶವನ್ನು 100 ಮೀಟರ್ ಒಳಗಡೆ ಪ್ರವೇಶಿಸಿ ಸ್ಫೋಟಗೊಂಡಿವೆ. ಇದು ಆಕಸ್ಮಿಕ ಘಟನೆಯಾಗಿದೆ' ಎಂದು ಬಲ್ಗೇರಿಯಾದ ರಕ್ಷಣಾ ಸಚಿವಾಲಯವು ತಿಳಿಸಿದೆ.
ಬಲ್ಗೇರಿಯಾ ಹಾಗೂ ರೊಮೇನಿಯಾ ಕೂಡ ನ್ಯಾಟೊ ಹಾಗೂ ಐರೋಪ್ಯ ಒಕ್ಕೂಟದ ಸದಸ್ಯರಾಷ್ಟ್ರಗಳಾಗಿವೆ. ಸ್ಫೋಟ ಸಂಭವಿಸಿದ ಒಂದು ಕಿ.ಮೀ. ದೂರದಲ್ಲಿ ಅಂತರರಾಷ್ಟ್ರೀಯ ಅನಿಲ ಪೈಪ್‌ಲೈನ್ ಹಾದುಹೋಗಿದೆ.
'ಬಲ್ಗೇರಿಯಾದಲ್ಲಿ ಡ್ರೋನ್ ಹಾರಿದ ಕುರಿತು ಸೇನೆಯು ಪರಿಶೀಲಿಸುತ್ತಿದೆ. ಬಲ್ಗೇರಿಯಾವನ್ನು ಉದ್ದೇಶಪೂರ್ವಕವಾಗಿ ದಾಳಿ ಮಾಡುವ ಉದ್ದೇಶ ಹೊಂದಿರಲಿಲ್ಲ' ಎಂದು ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಸ್ಪಷ್ಟನೆ ನೀಡಿದೆ.

