ಕಠ್ಮಂಡು: ಹಠಾತ್ ಪ್ರವಾಹದಿಂದ ನೇಪಾಳದ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ವೈದ್ಯಕೀಯ ಸಿಬ್ಬಂದಿ ಹಾಗೂ ಸುರಂಗ ರಕ್ಷಣಾ ತಜ್ಞರನ್ನು ಒಳಗೊಂಡ 11 ಸದಸ್ಯರ ಭಾರತೀಯ ತಂಡ ಶನಿವಾರ ನೇಪಾಳಕ್ಕೆ ತಲುಪಿದೆ.
ನೇಪಾಳ ಸರ್ಕಾರದ ಮನವಿಯ ಮೇರೆಗೆ ಭಾರತ ತಂಡವನ್ನು ಕಳುಹಿಸಿದೆ.
ಚಿಲಿಮೆ ಮತ್ತು ಲಾಂಗ್‌ಟಾಂಗ್ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ತಂಡವು ತ್ರಿಶೂಲಿ ಪ್ರದೇಶಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲು ಆರಂಭಿಸಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ-ಟಿಬೆಟ್ ಗಡಿಯ ಸಮೀಪದ ರಸುವಾ ಜಿಲ್ಲೆಯ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದು, ಕಾರ್ಮಿಕರನ್ನು ರಕ್ಷಿಸಲು ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ 82 ಸದಸ್ಯರ ಜಂಟಿ ಭದ್ರತಾ ತಂಡ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿದೆ. ಆದರೆ ಸುರಂಗದ ಪ್ರವೇಶದ್ವಾರದಲ್ಲಿ ಮಣ್ಣು ಮತ್ತು ಅವಶೇಷಗಳು ಗುಡ್ಡೆಗಟ್ಟಿರುವುದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿವೆ.
191 ಕಾರ್ಮಿಕರ ರಕ್ಷಣೆ
ವಿವಿಧ ಜಲವಿದ್ಯುತ್ ಯೋಜನೆಗಳ ಸುರಂಗಗಳಿಂದ ಇದುವರೆಗೆ 191 ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಸೇನೆ ತಿಳಿಸಿದೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ರಸುವಾ ಜಿಲ್ಲೆಯ ನಿರ್ಮಾಣ ಹಂತದಲ್ಲಿರುವ ತ್ರಿಶೂಲಿ-1 ಮೇಲ್ದಂಡೆ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆಯಿದೆ. ಸುರಂಗದಲ್ಲಿರುವ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸಿ ಅವರಿರುವ ಸ್ಥಳವನ್ನು ತಲುಪಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

