ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಾಗೂ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1947ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಕುರಿತು ನ್ಯಾಷನಲ್ ಕಾನ್ಫರೆನ್ಸ್ ನಾಯಕರು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು ಎಂದು ಹೇಳಿದ್ದಾರೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸದೇ ಇದ್ದಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಇಂದು ಜಮ್ಮು ಮತ್ತು ಕಾಶ್ಮೀರದೊಂದಿಗೆ ಮರುಸೇರ್ಪಡೆಗೊಳ್ಳಲು ಪ್ರತಿಭಟನೆ ನಡೆಸುತ್ತಿದ್ದರು ಎಂದು ಅಬ್ದುಲ್ಲಾ ಹೇಳಿದರು.
1947ರಲ್ಲಿ ಗಡಿಯಾಚೆಯಿಂದ ಬಂದ ಆಕ್ರಮಣಕಾರರನ್ನು ಎದುರಿಸಿದ ಶೇಖ್ ಮೊಹಮ್ಮದ್ ಅಬ್ದುಲ್ಲಾ ಮತ್ತು ಸ್ಥಳೀಯ ಸ್ವಯಂಸೇವಕರ ತ್ಯಾಗವನ್ನು ಸ್ಮರಿಸಿದ ಅವರು, ಭಾರತದ ಸೇನೆ ಆಗಮಿಸುವ ಮೊದಲು ಸಾವಿರಾರು ಮಂದಿ ಪ್ರದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದರು ಎಂದರು.
'ಗಡಿಯಾಚೆಯ ಪರಿಸ್ಥಿತಿಯನ್ನು ನೋಡಿದಾಗ, ಭಾರತ ಸೇರಲು ನಮ್ಮ ಪೂರ್ವಜರು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು ಎಂಬುದು ಅರ್ಥವಾಗುತ್ತದೆ' ಎಂದು ಅವರು ಹೇಳಿದರು.
ಪಿಒಕೆ ನಿವಾಸಿಗಳ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ ಅಬ್ದುಲ್ಲಾ, ಭಾರತ ಅವರನ್ನು ತನ್ನವರಾಗಿಯೇ ಪರಿಗಣಿಸುತ್ತದೆ ಎಂದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಿಒಕೆ ಪ್ರತಿನಿಧಿಗಳಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ವಿಶೇಷ ಸ್ಥಾನಮಾನ, ಸಾಂವಿಧಾನಿಕ ಭರವಸೆಗಳು ಮತ್ತು ರಾಜ್ಯದ ಸ್ಥಾನಮಾನವನ್ನು ಮರಳಿ ಪಡೆಯುವುದು ಜಮ್ಮು ಮತ್ತು ಕಾಶ್ಮೀರದ ಭವಿಷ್ಯಕ್ಕೆ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಹುತಾತ್ಮರ ತ್ಯಾಗವನ್ನು ಗೌರವಿಸುವುದು ಎಂದರೆ ಅವರು ಕಂಡ ಕನಸುಗಳನ್ನು ನನಸು ಮಾಡುವುದು. ವಿಶೇಷ ಸ್ಥಾನಮಾನ ಮರಳಿ ಪಡೆಯುವುದು, ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸುವುದು ಮತ್ತು ರಾಜ್ಯದ ಸ್ಥಾನಮಾನವನ್ನು ಮರಳಿ ಪಡೆಯುವುದು ನಮ್ಮ ಗುರಿ' ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ದೇಶದ ಎರಡು ಪ್ರಮುಖ ಸ್ತಂಭಗಳು ಎಂದು ಹೇಳಿದ ಅವರು, ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಿದರೆ ಅದರ ಪರಿಣಾಮ ಬೀದಿಗಳಲ್ಲಿ ಕಾಣಿಸುತ್ತದೆ ಎಂದು ಎಚ್ಚರಿಸಿದರು.

