ನವದೆಹಲಿ: ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ಡಿಜಿಟಲ್ ಸುದ್ದಿ ಜಾಲ ತಾಣ 'ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪಾರಿ)ಯ ಸಹ ಸಂಸ್ಥಾಪಕಿ ಸೋನ್ಯಾ ಗಿಲ್ (70) ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಮಂಗಳವಾರ ನಿಧನರಾದರು.
ಗಿಲ್ ಅವರು ಆಲ್ ಇಂಡಿಯಾ ಡೇಮಾಕ್ರೆಟಿಕ್ ವುಮೆನ್ಸ್ ಅಸೋಸಿಯೇಷನ್‌ನ ಮಹಾರಾಷ್ಟ್ರ ಘಟಕದ ಮಾಜಿ ಕಾರ್ಯದರ್ಶಿಯಾಗಿದ್ದರು.
ಅವರು ತಮ್ಮ ಪತಿ, ಪತ್ರಕರ್ತ ಪಿ.ಸಾಯಿನಾಥ್ ಅವರೊಂದಿಗೆ 2014 ಡಿಸೆಂಬರ್‌ನಲ್ಲಿ ಪಾರಿ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ಅದರ ಟ್ರಸ್ಟಿಯಾಗಿ ಮುಂದುವರಿದಿದ್ದರು.
ಸೋನ್ಯಾ ಗಿಲ್ ಅವರು ನಿಧನ ಮಹಿಳಾ ಚಳುವಳಿಗೆ ಅಪಾರ ಮತ್ತು ತುಂಬಲಾರದ ನಷ್ಟ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ವುಮನ್ಸ್ ಅಸೋಸಿಯೇಷನ್ ಬಣ್ಣಿಸಿದೆ.
ಗಿಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸಟಲ್ವಾಡ್, ಅವರು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ನೂರಾರು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು ಎಂದು ಬರೆದಿದ್ದಾರೆ.
ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮಾತನಾಡಿ, ಗಿಲ್ ಅವರ ನಿಧನವು ದೇಶದ ಪ್ರಗತಿಪರ ಮಹಿಳಾ ಚಳುವಳಿಗೆ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ.

