ರಾಂಚಿ: ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಜಾರ್ಖಂಡ್ ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ಮಾಡುವ ಮೂಲಕ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಜಾರ್ಖಂಡ್ ವಿಧಾನಸಭೆ ಸಮೀಪದ ಜಗನ್ನಾಥಪುರ ದೇವಸ್ಥಾನದ ಬಳಿಯ ಬ್ಯಾರಿಕೇಡ್ ಬಳಿ ಪ್ರತಿಭಟನಾನಿರತರು ತಲುಪಿದ ವೇಳೆ ಪೊಲೀಸರು ಅವರ ಮೇಲೆ ಅಶ್ರುವಾಯು, ಲಾಠಿಚಾರ್ಜ್ ಮೂಲಕ ದಾಳಿ ನಡೆಸಿದ್ದಾರೆ.
ಪ್ರತಿಭಟನಾನಿರತರು ಸದನಕ್ಕಿಂತ 200 ಮೀ ದೂರದಲ್ಲಿದ್ದಾಗ ಅವರ ಮೇಲೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ.
'ನಾವು ಶಾಂತಿಯುವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಸರ್ಕಾರವು ನಮ್ಮ ವಿರುದ್ಧ ಬಲಪ್ರಯೋಗ ಮಾಡಿದೆ. ಈ ವೇಳೆ ಹಲವು ಜನರಿಗೆ ಗಾಯಗಳಾಗಿವೆ. ಅವರು ಕೇವಲ ದೈಹಿಕ ಗಾಯಗಳನ್ನು ಉಂಟುಮಾಡಬಲ್ಲರು, ನಮ್ಮ ಆಲೋಚನೆಗಳಿಗೆ ಹಾನಿ ಮಾಡಲು ಸಾಧ್ಯವಿಲ್ಲ' ಎಂದು ಪ್ರತಿಭಟನಾನಿರತ ವಿದ್ಯಾರ್ಥಿ ಪಿಯೂಷ್ ಕುಮಾರ್ ಸೋನಿ ಅವರು ಪಿಟಿಐಗೆ ತಿಳಿಸಿದ್ದಾರೆ.
'ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳ ತಲೆ, ಕೈ ಮತ್ತು ಮುಖದ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲವು ವಿದ್ಯಾರ್ಥಿನಿಯರು ಕೂಡ ಗಾಯಗೊಂಡಿದ್ದಾರೆ' ಎಂದು ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನಲೆಯಲ್ಲಿ ಜಾರ್ಖಂಡ್ ವಿಧಾನಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ನೇಮಕಾತಿ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯು 17ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮತ್ತು ಪ್ರತಿಭಟನಾನಿರತರೊಂದಿಗೆ ಹಲವು ಹಂತದಲ್ಲಿ ಮಾತುಕತೆ ನಡೆದಿದ್ದು, ಅದೆಲ್ಲವೂ ವಿಫಲವಾಗಿದೆ.

