ನವದೆಹಲಿ: 'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆ 'ಜನ ಗಣ ಮನ'ಕ್ಕೆ ಸಮಾನವಾದ ಸ್ಥಾನಮಾನ ನೀಡುವ ಮತ್ತು ಗೀತೆಗೆ ಅಗೌರವ ತೋರಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಒಪ್ಪಿಗೆ ನೀಡಿದ್ದಾರೆ.
ರಾಷ್ಟ್ರಪತಿ ಅಂಕಿತದೊಂದಿಗೆ 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಮಸೂದೆ (ತಿದ್ದುಪಡಿ)- 2026' ಕಾನೂನಾಗಿ ಬದಲಾಗಿದೆ. ಲೋಕಸಭೆಯು ಜುಲೈ 30ರಂದು ಹಾಗೂ ರಾಜ್ಯಸಭೆಯು ಇದಕ್ಕೆ ಒಂದು ದಿನ ಮುಂಚಿತವಾಗಿ ಈ ಮಸೂದೆಯನ್ನು ಅಂಗೀಕರಿಸಿತ್ತು.
ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಇದೇ ಮೊದಲ ಬಾರಿ, 'ವಂದೇ ಮಾತರಂ' ಗೀತೆಯನ್ನು ಹಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದುವರೆಗೆ 'ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನಷ್ಟೇ ಹಾಡಲಾಗುತ್ತಿತ್ತು. ಗೀತೆಯ ಎಲ್ಲ ಆರು ಚರಣಗಳ ಹಾಡುವಿಕೆಯನ್ನು ಅಂಗೀಕೃತ ಮಸೂದೆಯು ಕಡ್ಡಾಯಗೊಳಿಸಿದೆ.
ಈ ಮೊದಲು, 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ' ರಾಷ್ಟ್ರಗೀತೆ (ಜನ ಗಣ ಮನ) ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅಥವಾ ಗಾಯನದಲ್ಲಿ ತೊಡಗಿರುವ ಸಭೆಗೆ ತೊಂದರೆ ಉಂಟುಮಾಡಿದರೆ ಮೂರು ವರ್ಷ ಜೈಲು ಮತ್ತು ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತಿತ್ತು. ಈ ಮಸೂದೆಗೆ ತಿದ್ದುಪಡಿ ತರುವ ಮೂಲಕ ರಾಷ್ಟ್ರಧ್ವಜ, ಸಂವಿಧಾನ ಹಾಗೂ ರಾಷ್ಟ್ರಗೀತೆಯಂತಹ ರಾಷ್ಟ್ರೀಯ ಚಿಹ್ನೆಗಳನ್ನು ಅಪವಿತ್ರಗೊಳಿಸುವುದನ್ನು ಅಥವಾ ಅಗೌರವಿಸುವುದನ್ನೂ ಶಿಕ್ಷಾರ್ಹವೆಂದು ಪರಿಗಣಿಸಲಾಗುತ್ತದೆ.
ಬಂಕಿಮಚಂದ್ರ ಚಟರ್ಜಿ ವಿರಚಿತ 'ವಂದೇ ಮಾತರಂ' ಗೀತೆಯನ್ನು 'ಜನ ಗಣ ಮನ' ರಾಷ್ಟ್ರಗೀತೆಯೊಂದಿಗೆ ಸಮಾನವಾಗಿ ಗೌರವಿಸಬೇಕು ಎಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ 1950, ಜನವರಿ 24ರಂದು ಹೇಳಿದ್ದರು. ಮಸೂದೆಯಲ್ಲಿ ವಂದೇ ಮಾತರಂಗೆ, ಜನ ಗಣ ಮನದ ಸಮಾನ ಸ್ಥಾನಮಾನ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಜನವರಿ 28ರ ಆದೇಶದಲ್ಲಿ, ಗೃಹ ಸಚಿವಾಲಯವು ರಾಷ್ಟ್ರಗೀತೆಯನ್ನು ಹಾಡಲು ಮೊದಲ ಹಂತದ ಶಿಷ್ಟಾಚಾರಗಳನ್ನು ಪ್ರಕಟಸಿತ್ತು. ಅದರ ಪ್ರಕಾರ 3 ನಿಮಿಷ 10 ಸೆಕೆಂಡುಗಳ ಅವಧಿಯ ಆರು ಚರಣಗಳನ್ನು ರಾಷ್ಟ್ರಪತಿಗಳ ಆಗಮನ, ರಾಷ್ಟ್ರಧ್ವಜ ಹಾರಾಟ ಮತ್ತು ರಾಜ್ಯಪಾಲರ ಭಾಷಣಗಳಂತಹ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ನಿರ್ದೇಶಿಸಿದೆ. ಹಲವು ನಿರ್ದೇಶನಗಳನ್ನು ಹೊಂದಿರುವ ಈ ಆದೇಶವು, ಎಲ್ಲ ಶಾಲೆಗಳಲ್ಲಿ ದಿನದ ಆರಂಭವು ರಾಷ್ಟ್ರಗೀತೆಯ ಸನಯದಾಯ ಗಾಯನದೊಂದಿಗೆ ಪ್ರಾರಂಭವಾಗಬೇಕು ಎಂದು ಹೇಳಿದೆ.

