ಕಾಸರಗೋಡು: ಪ್ರಯಾಣಿಕರ ಸಂಚಾರ ದಟ್ಟಣೆ ಹೆಚ್ಚಿರುವ ಕಾಸರಗೋಡು ಜಿಲ್ಲೆಯಲ್ಲಿ ಓಣಂ ಸೇರಿದಂತೆ ವಿವಿಧ ಹಬ್ಬದ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ಯಾಸೆಂಜರ್, ಮೆಮು ರೈಲು ಸೇವೆಗಳನ್ನು ಒದಗಿಸಲು ಹಾಗೂ ಪ್ರಸಕ್ತ ಸಂಚರಿಸುತ್ತಿರುವ ವಿವಿಧ ರೈಲುಗಳಿಗೆ ತುರ್ತಾಗಿ ತಾತ್ಕಾಲಿಕ ನಿಲುಗಡೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನುಕೇಂದ್ರ ರೈಲ್ವೆ ಖಾತೆಯನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಆಗ್ರಹಿಸಿದ್ದಾರೆ.
ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಮುಂತಾದ ಹಬ್ಬಗಳ ಅಂಗವಾಗಿ ಮುಂಬರುವ ಒಂದು ತಿಂಗಳ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನು ಪರಿಗಣಿಸಿ ಹೆಚ್ಚುವರಿ ಪ್ಯಾಸೆಂಜರ್-ಮೆಮು ಸೇವೆಗಳನ್ನು ಮಂಜೂರು ಮಾಡಲು ಮತ್ತು ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗಳನ್ನು ನೀಡುವಂತೆ ಸಚಿವರನ್ನು ಒತ್ತಾಯಿಸಲಾಗಿದೆ.
ಪ್ರಸಕ್ತ ನೀಡಲಾಗುತ್ತಿರುವ ತಾತ್ಕಾಲಿಕ ನಿಲುಗಡೆಗಳನ್ನು ನಂತರ ಕಾಯಂಗೊಳಿಸಲೂ ಅಗತ್ಯ ಪ್ರಯತ್ನ ಕೈಗೊಳ್ಳಬೇಕು. ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಮುಂತಾದ ಅಗತ್ಯಗಳಿಗಾಗಿ ಇತರ ಜಿಲ್ಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಬಹುಪಾಲು ಜನರಿದ್ದಾರೆ. ಹಬ್ಬದ ರಜೆಗಳು ಆರಂಭವಾಗುವುದರೊಂದಿಗೆ ಪ್ರಯಾಣದ ಸಮಸ್ಯೆ ಜಟಿಲಗೊಳ್ಳುವುದರಿಂದ ಪ್ರಯಾಣಿಕರ ಸಂಕಷ್ಟಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕಜಾದ ಅಗತ್ಯವಿದೆ ಎಂದೂ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಹಾಗೂ ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕತ್ವಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಶ್ವಿನಿ ತಿಳಿಸಿದ್ದಾರೆ.


