ಇಂದೋರ್: ಪರಿಣಾಮಕಾರಿ ನ್ಯಾಯದಾನಕ್ಕೆ ಸಂವಾದ, ಘನತೆ ಮತ್ತು ಎಲ್ಲರನ್ನು ಒಳಗೊಳ್ಳುವುದು ಅಗತ್ಯ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಶನಿವಾರ ಅಭಿಪ್ರಾಯಪಟ್ಟರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾನೂನು ನೆರವು ಕೇವಲ ಪ್ರಕರಣಗಳನ್ನು ಇತ್ಯರ್ಥಪಡಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರ ಮುಖ್ಯ ಉದ್ದೇಶ ಜನರಿಗೆ ಗೌರವ ಮತ್ತು ನ್ಯಾಯ ಒದಗಿಸುವುದಾಗಿದೆ ಎಂದು ಒತ್ತಿ ಹೇಳಿದರು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪಶ್ಚಿಮ ವಲಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸಂವಾದದ ಮೂಲಕವೇ ನ್ಯಾಯದ ಲಭ್ಯತೆ ಆರಂಭವಾಗುತ್ತದೆ. ಜನರು ಎದುರಿಸುವ ನಿರ್ದಿಷ್ಟ ಸಮಸ್ಯೆಗೆ ಅನುಗುಣವಾಗಿ ಪರಿಹಾರ ನೀಡಬೇಕು' ಎಂದು ಹೇಳಿದರು.
ವಿವಿಧ ಸಮುದಾಯಗಳ ಅಳಲುಗಳನ್ನು ಅವರದ್ದೇ ಭಾಷೆಯಲ್ಲಿ ಆಲಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಾಕಿ ಪ್ರಕರಣಗಳ ಸಂಖ್ಯೆ ಕಡಿತ: ಸಿಜೆಐ
ದೇಶದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯು 10 ಅಥವಾ 20 ವರ್ಷಗಳ ಹಿಂದಿನಷ್ಟಿಲ್ಲ. ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಲಾದ ಹಲವು ಯೋಜನೆಗಳಿಂದ ವೇಗವಾಗಿ ಪ್ರಕರಣಗಳ ಇತ್ಯರ್ಥ ಮಾಡಲು ಸಾಧ್ಯವಾಗುತ್ತಿದೆ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದರು. 'ತಂತ್ರಜ್ಞಾನದ ಬಳಕೆಯಿಂದ ಒಳ್ಳೆಯ ಫಲಿತಾಂಶ ಲಭ್ಯವಾಗುತ್ತಿದೆ' ಎಂದು ಹೇಳಿದರು. ಕೊಲಿಜಿಯಂ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಪದೇ ಪದೇ ವಾಪಸ್ ಕಳುಹಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 'ಈ ಬಗ್ಗೆ ಇಲ್ಲಿ ಮಾತನಾಡುವಂತಿಲ್ಲ. ಇದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕ್ರಮ' ಎಂದು ಹೇಳಿದರು.

