ಬದಿಯಡ್ಕ: ನೀರ್ಚಾಲು-ಪುದುಕೋಳಿ-ಮಾನ್ಯ ರಸ್ತೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಂಪರ್ಕ ಸಂಕಷ್ಟವನ್ನು ಎದುರಿಸುತ್ತಿದ್ದು, ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿದೆ.
ಪುದುಕೋಳಿ ಅಂಗನವಾಡಿ ಪ್ರದೇಶದಿಂದ ಮಾನ್ಯ ಕಡವು ವರೆಗೆ ಸುಮಾರು ಎರಡೂವರೆ ಕಿಲೋಮಿಟರ್ ಕಚ್ಚಾ ರಸ್ತೆಯಾಗಿದ್ದು, ಡಾಂಬರೀಕರಣವಿಲ್ಲದೆ ದಶಕಗಳಿಂದ ಜನರ ಪ್ರಯಾಣ ಸಂಕಷ್ಟಕ್ಕೆ ಕಾರಣವಾಗಿದೆ. ಹಲವು ಕುಟುಂಬಗಳು ಬಳಸುವ ಗ್ರಾಮ ಪಂಚಾಯತಿ ಆಡಳಿತಕ್ಕೊಳಪಟ್ಟ ಈ ರಸ್ತೆಯ ದುರವಸ್ಥೆಯಿಂದ ವಿದ್ಯಾರ್ಥಿಗಳು, ಮಹಿಳೆಯರ ಸಹಿತ ನಾಗರಿಕರ ಪ್ರಯಾಣಕ್ಕೆ ಇದೀಗ ಸುರಿಯುತ್ತಿರುವ ಭಾರೀ ಮಳೆಯಿಂದ ವ್ಯಾಪಕ ಸವಾಲಾಗಿ ಪರಿಣಮಿಸಿದೆ.
ನದಿಯಾದ ರಸ್ತೆ:
ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪುದುಕೋಳಿ ವ್ಯಾಪ್ತಿಯ ರಸ್ತೆ ಅಕ್ಷರಶಃ ನದಿಯಾಗಿ ಮಾರ್ಪಟ್ಟಿದೆ. ಕಚ್ಚಾರಸ್ತೆಯ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು ಬೃಹತ್ ಹೊಂಡಗಳು ಸೃಷ್ಟಿಯಾಗಿ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಮುಂದಿದೆ. ರಸ್ತೆಯ ಒಂದು ಮಗ್ಗುಲಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಇನ್ನೂ ಸಂಪರ್ಕ ನೀಡದ ಕುಡಿಯುವ ನೀರಿನ ಪೈಫ್ ಲೈನ್ ಗೆ ತೋಡಲಾದ ಕಣಿವೆ ಅಲ್ಲಲ್ಲಿ ಬಾಯ್ಬಿಟ್ಟಿದ್ದು, ಅದರಲ್ಲಿ ಮಳೆ ನೀರು ಸೇರ್ಪಡೆಗೊಂಡು ಭೀತಿಯ ವಾತಾವರಣ ಸೃಷ್ಟಿಸಿದೆ. ಈ ಬಗ್ಗೆ ಸಂಬಂಧಪಟ್ಟವರು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕೆಮದು ನಾಗರಿಕರು ಆಗ್ರಹಿಸಿದ್ದಾರೆ.

.jpg)
.jpg)
