ನವದೆಹಲಿ: ಆನ್‌ಲೈನ್ ಮೂಲಕ ದೈಹಿಕ ಹಲ್ಲೆ ನಡೆಸುವ ಬೆದರಿಕೆ, ಖಾಸಗಿ ಮಾಹಿತಿಗಳ ಬಹಿರಂಗ ಸೇರಿದಂತೆ ಗಂಭೀರ ಸೈಬರ್ ಅಪರಾಧಗಳ ತಡೆಗೆ ಕ್ರಮಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು, ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.
ಇಂಥ ಅಪರಾಧಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೂವರು ಸಚಿವರು ಮತ್ತು ಸಂಬಂಧಿತರಿಗೆ ಸೂಚಿಸಿತು. ಗಂಭೀರ ಕಾನೂನುಬಾಹಿರ ಡಿಜಿಟಲ್ ಅಪರಾಧಗಳ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಪೂರಕ ವ್ಯವಸ್ಥೆ ರೂಪಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

