HEALTH TIPS

ಅಧಿಕಾರ ದುರುಪಯೋಗ ಆರೋಪ: ರಾಜಸ್ಥಾನ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನು ಬದಲಾಯಿಸುವಂತೆ CJIಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಪತ್ರ

ನವದೆಹಲಿ:  ರಾಜಸ್ಥಾನ ಹೈಕೋರ್ಟ್‌ಗೆ ತಕ್ಷಣದಿಂದಲೇ ಬೇರೆ ರಾಜ್ಯದ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಸಿಜೆಐ ಸೂರ್ಯಕಾಂತ್ ಅವರಿಗೆ ಪತ್ರವನ್ನು ಬರೆದಿದ್ದಾರೆ ಎಂದು barandbench.com ವರದಿ ಮಾಡಿದೆ.


ನ್ಯಾಯಮೂರ್ತಿ ಮೆಹ್ತಾ ಅವರು ಆಗಸ್ಟ್ 2, ಆಗಸ್ಟ್ 10 ಮತ್ತು ಆಗಸ್ಟ್ 17ರಂದು ಬರೆದ ಪತ್ರದಲ್ಲಿ, ಮುಂದಿನ ತಿಂಗಳು ನಿವೃತ್ತಿಯಾಗಲಿರುವ ರಾಜಸ್ಥಾನ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ವಿರುದ್ಧ ಶ್ರೀಮಂತ ಅರ್ಜಿದಾರರಿಗೆ ಅನುಕೂಲವಾಗುವಂತೆ ಪ್ರಕರಣಗಳ ವಿಚಾರಣಾ ಪಟ್ಟಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಹಾಗೂ ತಮ್ಮ ಆಡಳಿತಾತ್ಮಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.

ನ್ಯಾಯಮೂರ್ತಿ ಶರ್ಮಾ ಅವರು 2016ರ ನವೆಂಬರ್ ನಲ್ಲಿ ರಾಜಸ್ಥಾನ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು 2022ರಲ್ಲಿ ಪಾಟ್ನಾ ಹೈಕೋರ್ಟ್‌ಗೆ ಅವರನ್ನು ವರ್ಗಾಯಿಸಲಾಯಿತು. ಆದರೆ, ಅವರು ಆರೋಗ್ಯದ ದೃಷ್ಟಿಯಿಂದ ವರ್ಗಾವಣೆಯಿಂದ ವಿನಾಯಿತಿ ಕೋರಿದ್ದರು. ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಮಾರ್ಚ್ 2023ರಲ್ಲಿ ವಿನಂತಿಯನ್ನು ತಿರಸ್ಕರಿಸಿತ್ತು. ಬದಲಿಗೆ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಕಳುಹಿಸಿತ್ತು. ಮೇ 2025ರಲ್ಲಿ ಹೊಸ ಕೊಲಿಜಿಯಂ ರಾಜಸ್ಥಾನಕ್ಕೆ ಮರಳುವಂತೆ ಅವರಿಗೆ ಶಿಫಾರಸು ಮಾಡಿತು. ಅವರು ರಾಜಸ್ಥಾನ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾದರು.

ಆಗಸ್ಟ್ 2ರಂದು ಸಿಜೆಐಗೆ ಬರೆದ ಮೊದಲ ಪತ್ರದಲ್ಲಿ ನ್ಯಾಯಮೂರ್ತಿ ಮೆಹ್ತಾ ಅವರು, ರಾಜಸ್ಥಾನಕ್ಕೆ ತಮ್ಮ ಭೇಟಿಯ ಸಂದರ್ಭದಲ್ಲಿ ರಾಜಸ್ಥಾನ ಹೈಕೋರ್ಟ್‌ನ ಹಲವಾರು ನ್ಯಾಯಮೂರ್ತಿಗಳು ನನ್ನನ್ನು ಭೇಟಿಯಾಗಿ, ನ್ಯಾಯಮೂರ್ತಿ ಎಸ್.ಪಿ. ಶರ್ಮಾ ಅವರ ವರ್ತನೆಯ ಬಗ್ಗೆ ನನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡು ಸಹ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಸೇರಿದಂತೆ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವುದಾಗಿ ನ್ಯಾಯಮೂರ್ತಿ ಎಸ್.ಪಿ. ಶರ್ಮಾ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ನ್ಯಾಯಮೂರ್ತಿ ಮೆಹ್ತಾ ಅವರು ಪತ್ರದಲ್ಲಿ ಇತ್ತೀಚೆಗೆ ಪ್ರಕರಣವೊಂದರಲ್ಲಿ CJI ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಮಾಡಿದ್ದ ಮಹತ್ವದ ಅವಲೋಕನವನ್ನು ಉಲ್ಲೇಖಿಸಿದ್ದಾರೆ. "ನಿವೃತ್ತಿಯ ಮುನ್ನ ಕೆಲವು ನ್ಯಾಯಮೂರ್ತಿಗಳು ಬಾಹ್ಯ ಅಥವಾ ಅನಗತ್ಯ ಕಾರಣಗಳನ್ನು ಪರಿಗಣಿಸಿ ಆದೇಶಗಳನ್ನು ನೀಡುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ ಪೀಠವು ಗಮನಿಸಿತ್ತು. ನಿವೃತ್ತಿಯಾಗುವ ಮುನ್ನ "ನ್ಯಾಯಮೂರ್ತಿಗಳು ಸಿಕ್ಸರ್‌ಗಳನ್ನು ಬಾರಿಸಲು ಪ್ರಯತ್ನಿಸುತ್ತಿದ್ದಾರೆ" ಎಂಬುದನ್ನೂ ಪೀಠವು ಉಲ್ಲೇಖಿಸಿತ್ತು.

ನ್ಯಾಯಮೂರ್ತಿ ಶರ್ಮಾ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ "ಸಿಕ್ಸರ್‌ಗಳನ್ನು ಬಾರಿಸಲು ಪರವಾನಗಿ ಪಡೆದವರಂತೆ ವರ್ತಿಸುತ್ತಿರುವಂತೆ ಕಂಡುಬರುತ್ತಿದೆ" ಎಂದು ನ್ಯಾಯಮೂರ್ತಿ ಮೆಹ್ತಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್ 17ರಂದು ಬರೆದ ಪತ್ರದಲ್ಲಿ, ರಾಜಸ್ಥಾನ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಉಮಾಶಂಕರ್ ವ್ಯಾಸ್ ಅವರು ತಮ್ಮ ಪತ್ನಿಯ ವಿರುದ್ಧ ನ್ಯಾಯಮೂರ್ತಿ ಶರ್ಮಾ ಪ್ರತೀಕಾರದ ಮನೋಭಾವದಿಂದ ವರ್ತಿಸುತ್ತಿದ್ದಾರೆ ಎಂದು ಸಹ ನ್ಯಾಯಮೂರ್ತಿಗಳ ಬಳಿ ಹೇಳಿಕೊಂಡಿದ್ದರು. ಅವರ ಪತ್ನಿ ಜಿಲ್ಲಾ ನ್ಯಾಯಾಂಗದ ಹಿರಿಯ ಅಧಿಕಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಜೋಧ್‌ಪುರದಲ್ಲಿ ನಿರ್ಮಿಸಲಾದ ನೂತನ ನ್ಯಾಯಾಲಯ ಕಟ್ಟಡದ ಉದ್ಘಾಟನೆಯನ್ನು ಶರ್ಮಾ ಅವರು ತಮ್ಮ ಸ್ವಇಚ್ಛೆ ಮತ್ತು ಹಠಮಾರಿ ನಿರ್ಧಾರಗಳಿಂದ ವಿಳಂಬಗೊಳಿಸಿದ್ದಾರೆ ಎಂದು ನ್ಯಾಯಮೂರ್ತಿ ವ್ಯಾಸ್ ಆರೋಪಿಸಿದ್ದಾರೆ ಎನ್ನಲಾಗಿದೆ.

ವಕೀಲೆ ಪೂಜಾ ತ್ರಿಪಾಠಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರಿಗೆ ಬರೆದ ಪ್ರತ್ಯೇಕ ದೂರಿನ ಪ್ರತಿಯನ್ನು ನ್ಯಾಯಮೂರ್ತಿ ಮೆಹ್ತಾ ಸೇರಿದಂತೆ ಇನ್ನೂ 16 ಮಂದಿಗೆ ಕಳುಹಿಸಲಾಗಿದೆ. ಆ ದೂರಿನಲ್ಲಿ, ನ್ಯಾಯಮೂರ್ತಿ ಶರ್ಮಾ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಸ್ಥಾನವನ್ನು ಬಳಸಿಕೊಂಡು ತಮ್ಮ ಬಾಲ್ಯದ ಸ್ನೇಹಿತ ಮತ್ತು ಇಬ್ಬರು ಜಿಲ್ಲಾ ನ್ಯಾಯಾಧೀಶರ ಸಂಗಾತಿಗಳು ಸೇರಿದಂತೆ ಜೈಪುರ ಮತ್ತು ಅಜ್ಮೀರ್‌ನಲ್ಲಿನ ತಮ್ಮ ಆಪ್ತ ವ್ಯಕ್ತಿಗಳಿಗೆ ಅದಾಲತ್ ನೇಮಕಾತಿಗಳನ್ನು ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅದೇ ದೂರಿನಲ್ಲಿ, ನ್ಯಾಯಮೂರ್ತಿ ಶರ್ಮಾ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿಗಾಗಿ ನಾಲ್ವರು ಮಹಿಳಾ ವಕೀಲರ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಈ ನಾಲ್ವರು ಮಹಿಳಾ ವಕೀಲರ ಪೈಕಿ ಯಾರೂ ಸಕ್ರಿಯವಾಗಿ ವಕೀಲಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿಲ್ಲ. ಅವರಲ್ಲಿ ಪ್ರತಿಯೊಬ್ಬರೂ ನ್ಯಾ.ಶರ್ಮಾ ಅವರಿಗೆ ಆಪ್ತರಾಗಿರುವ ಹಿರಿಯ ವಕೀಲ ಅಥವಾ ನಿವೃತ್ತ ನ್ಯಾಯಮೂರ್ತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ನ್ಯಾಯಾಂಗ ಸಂಸ್ಥೆಯನ್ನು ಮತ್ತಷ್ಟು ಹಾನಿಯಿಂದ ರಕ್ಷಿಸಲು, ನ್ಯಾಯಮೂರ್ತಿ ಶರ್ಮಾ ಅವರನ್ನು ತಕ್ಷಣವೇ ರಾಜಸ್ಥಾನದಿಂದ ಬೇರೆಡೆಗೆ ವರ್ಗಾಯಿಸುವಂತೆ ಕೊಲಿಜಿಯಂಗೆ ನ್ಯಾಯಮೂರ್ತಿ ಮೆಹ್ತಾ ಮನವಿ ಮಾಡಿದ್ದಾರೆ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries