ಹೈದರಾಬಾದ್: ರಾಮಮಂದಿರ ದೇಣಿಗೆ ಕಳವಿನಂತಹ ಆರೋಪಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಡೆಗಣಿಸುತ್ತಿದೆ. ಇದು ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದನ್ನು ಅದು ಮರೆತಿದೆ ಕಾಂಗ್ರೆಸ್ ಸಂಸದ ಪವನ್ ಖೇರಾ ರವಿವಾರ ಆರೋಪಿಸಿದ್ದಾರೆ.
ಭ್ರಷ್ಟಾಚಾರ ಆರೋಪಿಸಿ ಸಂಸತ್ತಿನ ಆವರಣದಲ್ಲಿ ಪ್ರಹಸನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ವಾರಣಾಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ ಬಳಿಕ ಪವನ್ ಖೇರಾ ಈ ಹೇಳಿಕೆ ನೀಡಿದ್ದಾರೆ.
''ಸಂಸದರ ವಿರುದ್ಧ ಎಫ್‌ಐಆರ್ ಗಳನ್ನು ದಾಖಲಿಸಲಾಗುತ್ತಿದೆ. ಆದರೆ ದೇಣಿಗೆ ಕಳ್ಳತನವಾದಾಗ ಅದು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂಬುದನ್ನು ಸರಕಾರ ಮರೆಯುತ್ತದೆ'' ಎಂದು ಪವನ್ ಖೇರಾ ಹೇಳಿದ್ದಾರೆ.
ಪೂರ್ಣಿಯಾ ಸಂಸದ ಪಪ್ಪು ಯಾದವ್ ಅವರು ದೇವಸ್ಥಾನದ ಪೂಜಾರಿಯಂತೆ ವೇಷ ಹಾಕಿ, ಕಾವಿ ಉಡುಪು ಧರಿಸಿದ್ದರು. ಅವರು, ವಿರೋಧ ಪಕ್ಷದ ಇತರ ಸದಸ್ಯರೊಂದಿಗೆ ಸೇರಿ ದೇಣಿಗೆ ಪೆಟ್ಟಿಗೆ ಬಳಸಿ ಪ್ರಹಸನ ಪ್ರದರ್ಶಿಸಿದ್ದರು ಹಾಗೂ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಪ್ರಹಸನ ವಿವಾದದ ಕೇಂದ್ರ ಬಿಂದುವಾಗಿತ್ತು.
ಕ್ಷೇತ್ರ ಪುನರ್ವಿಂಗಡಣೆ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಪವನ್ ಖೇರಾ, ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆ ಸಂಪೂರ್ಣ ಸರಿಯಾಗಿದೆ ಎಂದರು.
ತಮ್ಮ ರಾಜ್ಯಗಳ ಬಗ್ಗೆ ಕಳಕಳಿ ಇರುವ ಪ್ರತಿಯೊಬ್ಬರೂ ಕ್ಷೇತ್ರ ಪುನರ್ವಿಂಗಡಣೆಯನ್ನು ವಿರೋಧಿಸಬೇಕು ಎಂದು ಅವರು ಹೇಳಿದರು.

