ಐಐಟಿ ದಿಲ್ಲಿಯ 57ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ 30 ರಿಂದ 35 ವರ್ಷ ನೀವು ಮಾಡುವ ಕೆಲಸಗಳು ವಿಕಸಿತ ಭಾರತದತ್ತ ಭಾರತದ ಪಯಣವನ್ನು ರೂಪಿಸಲಿವೆ. ನಿಮ್ಮ ಪದವಿ ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದೀರಿ, ಉತ್ತಮ ಉದ್ಯೋಗ ಪಡೆದಿದ್ದೀರಿ ಎಂಬುದಕ್ಕೆ ಪುರಾವೆಯಲ್ಲ. ಬದಲಾಗಿ, ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಬದಲಾಗುತ್ತಿರುವ ಜಗತ್ತಿನ ಸವಾಲುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಐಐಟಿ ಹಳೆಯ ವಿದ್ಯಾರ್ಥಿಗಳ ಯಶಸ್ಸಿಗೆ ಅವರು ಸರಿಯಾದ ಉತ್ತರಗಳನ್ನು ಕಂಡುಕೊಂಡಿದ್ದು ಮಾತ್ರ ಕಾರಣವಲ್ಲ, ಜಗತ್ತು ಕೇಳುವುದನ್ನು ನಿಲ್ಲಿಸಿರುವ ಪ್ರಶ್ನೆಗಳನ್ನು ಅವರು ಗುರುತಿಸಿದ್ದರಿಂದ ಎಂದು ಮೋದಿ ಹೇಳಿದರು."ಕೇವಲ ಪ್ರಶ್ನೆಗಳನ್ನು ಕೇಳಬೇಡಿ. ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು " ಎಂದು ಹೇಳಿದರು.
ಇನ್ನು 20 ಅಥವಾ 30 ವರ್ಷಗಳ ನಂತರ ಜಗತ್ತು ಹೇಗಿರಲಿದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಆದರೆ, ಬದಲಾವಣೆಯ ಪ್ರತಿಯೊಂದು ಅವಧಿಯೂ ಸವಾಲುಗಳು ಮತ್ತು ಅವಕಾಶಗಳನ್ನು ಎರಡನ್ನೂ ತರುತ್ತದೆ. ನಿರಂತರವಾಗಿ ಕಲಿಯುತ್ತಲೇ ಇರುವವರು ಯಶಸ್ವಿಯಾಗುತ್ತಾರೆ. ಹೊಸ ಪರಿಹಾರಗಳನ್ನು ಕಂಡುಕೊಳ್ಳುವವರು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

