ರಾಂಚಿ: ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 10ರಂದು ಉದ್ಯೋಗಾಕಾಂಕ್ಷಿಗಳು ರಾಜ್ಯ ವಿಧಾನಸಭೆಗೆ ಹಮ್ಮಿಕೊಂಡಿದ್ದ ಮೆರವಣಿಗೆಗೆ ಸಂಬಂಧಿಸಿದಂತೆ, ಜಾರ್ಖಂಡ್ ಪೊಲೀಸರು ವಿಧಾನಸಭೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಕರ್ತವ್ಯದಲ್ಲಿದ್ದ ಮ್ಯಾಜಿಸ್ಟ್ರೇಟ್ ಮುಹಮ್ಮದ್ ನಿಶತ್ ಅಹ್ಮದ್ ಅವರ ಹೇಳಿಕೆಯ ಆಧಾರದಲ್ಲಿ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ವಿವಿಧ ವಿಧಿಗಳ ಅಡಿಯಲ್ಲಿ ಅಪರಿಚಿತ ಗಲಭೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸರಕಾರಿ ಕೆಲಸಕ್ಕೆ ಅಡ್ಡಿ, ಸರಕಾರಿ ನೌಕರರ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಕ್ಕಾಗಿ ವಿಧಿ 109, 115(2), 117(2), 121, 132, 189(2)(3), 190, 191(2), 221, 223, 285 ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಲಭೆಕೋರರನ್ನು ಗುರುತಿಸಲು ಪೊಲೀಸರು ಪ್ರಸ್ತುತ ವೀಡಿಯೋ ತುಣುಕುಗಳು ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
300 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರಾಂಚಿ ನಗರ ಪೊಲೀಸ್ ವರಿಷ್ಠಾಧಿಕಾರಿ ಪಾರಸ್ ರಾಣಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕಲ್ಲು ತೂರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಎಫ್‌ಐಆರ್ನಲ್ಲಿ ಆರೋಪಿಸಲಾಗಿದೆ. ತರಬೇತಿ ಪಡೆಯುತ್ತಿರುವ ಕಾನ್ಸ್ಟೆಬಲ್ ಫಲ್ಗುಣಿ ಯಾದವ್ ಅವರ ತಲೆಗೆ ಗಾಯಗಳಾಗಿದ್ದರಿಂದ ಅವರನ್ನು ತಕ್ಷಣದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅದು ಹೇಳಿದೆ.
ವಿದ್ಯಾರ್ಥಿಗಳ ವಕ್ತಾರ ಪಿಯೂಷ್ ಕುಮಾರ್ ಸಿಂಗ್ ಮಾತನಾಡಿ, ಈ ಎಫ್‌ಐಆರ್ ಅನ್ನು ಬಳಸಿಕೊಂಡು ನಿಜವಾದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಬಾರದು ಎಂದು ಆಗ್ರಹಿಸಿದರು. ಯಾವೊಬ್ಬ ನೈಜ ವಿದ್ಯಾರ್ಥಿಗೂ ಕಿರುಕುಳ ನೀಡಬಾರದು ಎಂದು ಅವರು ಹೇಳಿದರು.

