HEALTH TIPS

ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯದ ತನಿಖೆಗೆ ಉನ್ನತ ಮಟ್ಟದ ಸಮಿತಿ: SC

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ 'ಸಂಸತ್‌ ಚಲೊ' ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ನಡೆದ ಹಿಂಸಾಚಾರದ ಆರೋಪಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ. 


ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಡಿಜಿಪಿ ಮತ್ತು ಮಾಜಿ ಸಿಬಿಐ ನಿರ್ದೇಶಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು, 'ಉನ್ನತ ಮಟ್ಟದ ಸಮಿತಿಗೆ ಸೇರಿಸಬೇಕಾದ ಇತರ ಸದಸ್ಯರ ಕುರಿತು ವಿವಿಧ ಪಕ್ಷಗಳಿಂದ ಸಲಹೆಗಳನ್ನು ಪಡೆದು ಬುಧವಾರ ಸಮಿತಿ ರಚನೆಯ ಆದೇಶ ಹೊರಡಿಸಲಾಗುವುದು' ಎಂದು ತಿಳಿಸಿದೆ.

ಸಮಿತಿಗೆ ಸತ್ಯಶೋಧನೆಯ ಹೊಣೆ ವಹಿಸಲಾಗುವುದು. ಅದಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದೂ ಪೀಠ ಹೇಳಿದೆ.

'ಈ ಸಮಿತಿಯು ಸಂತ್ರಸ್ತರ ಮಾತನ್ನು ಆಲಿಸಲಿಸುವ ಮೂಲಕ ತಕ್ಷಣ ಸ್ಪಂದಿಸಲಿದೆ ಎಂಬ ಭರವಸೆ ನಮಗಿದೆ. ಸಮಿತಿಯು ಕಾಲಕಾಲಕ್ಕೆ ನೀಡುವ ಶಿಫಾರಸುಗಳನ್ನು ಪರಿಶೀಲಿಸಿ ಅಗತ್ಯ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು' ಎಂದು ಪೀಠ ವಿವರಿಸಿದೆ.

ಮಹಿಳಾ ಪ್ರತಿಭಟನಾಕಾರರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇತರ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿದ ಆರೋಪಗಳನ್ನೂ ಈ ಸಮಿತಿಯು ಪರಿಶೀಲಿಸಲಿದೆ ಎಂದೂ ಕೋರ್ಟ್ ತಿಳಿಸಿದೆ.

'ಯಾರೇ ಜವಾಬ್ದಾರರಾಗಿದ್ದರೂ, ಅದಕ್ಕೆ ಯಾವುದೇ ಸಮರ್ಥನೆ ಅಥವಾ ಕ್ಷಮೆಯಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಅದಕ್ಕಾಗಿಯೇ ನಾವು ಉನ್ನತ ಮಟ್ಟದ ಸಮಿತಿಯನ್ನು ರಚಿಸುತ್ತಿದ್ದೇವೆ' ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದಾರೆ.

ಜುಲೈ 20ರಂದು ದೆಹಲಿಯಲ್ಲಿ ಸಂಸತ್ ಚಲೊ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದ ವಿಡಿಯೊಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗಾಗಿ ಉನ್ನತ ಮಟ್ಟದ ಸಮಿತಿಗೆ ಹಸ್ತಾಂತರಿಸಲು ನಿರ್ದೇಶನ ನೀಡುವುದಾಗಿಯೂ ಸುಪ್ರೀಂ ಕೋರ್ಟ್ ತಿಳಿಸಿದೆ.

ಸಂವಿಧಾನದ 142ನೇ ವಿಧಿ ಅಡಿಯಲ್ಲಿ ತನ್ನ ಪೂರ್ಣ ಪ್ರಮಾಣದ ಅಧಿಕಾರವನ್ನು ಬಳಸುವ ಸುಳಿವು ನೀಡಿದ ಪೀಠವು, ರದ್ದುಗೊಳಿಸಬೇಕಾದ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ವಿವರಗಳನ್ನು ಒದಗಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸೂಚಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries