ಕೋಲ್ಕತ್ತ: 'ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಬೇಕು' ಎಂದು ಲೇಖಕಿ ತಸ್ಲಿಮಾ ನಸ್ರೀನ್ ಪ್ರತಿಪಾದಿಸಿದ್ದಾರೆ. ಜತೆಗೆ, ಮಹಿಳೆಯರ ವಿರುದ್ಧದ ತಾರತಮ್ಯ ತೊಡೆದುಹಾಕಲು ಇಂತಹ ಕಾನೂನು ಅತ್ಯಗತ್ಯ' ಎಂದೂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಎಲ್ಲ ಮುಂದುವರಿದ ದೇಶಗಳು 'ಯುಸಿಸಿ' ಮಾದರಿಯ ಕಾನೂನನ್ನು ಹೊಂದಿವೆ.
ಭಾರತವೂ ಸೇರಿದಂತೆ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲೂ ಇಂತಹ ಕಾನೂನಿನ ಅಗತ್ಯವಿದೆ. ಎಲ್ಲರಿಗೂ ಸಮಾನ ಕಾನೂನು ಇರಬೇಕು. ಮಹಿಳೆಯರು ಎದುರಿಸುತ್ತಿರುವ ಹೆಚ್ಚಿನ ತಾರತಮ್ಯವನ್ನು ಯುಸಿಸಿ ಮೂಲಕ ತೊಡೆದುಹಾಕಬಹುದು' ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರವು ಏಕರೂಪದ ನಾಗರಿಕ ಸಂಹಿತೆ ಕರಡನ್ನು ಪರಿಶೀಲಿಸಲು ಉನ್ನತಾಧಿಕಾರ ಸಮಿತಿ ರಚಿಸಿದ್ದು, ಇದರ ಬೆನ್ನಲ್ಲೇ ತಸ್ಲೀಮಾ ಹೇಳಿಕೆ ಹೊರಬಿದ್ದಿದೆ.
'ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರಿಗೆ ಸಮಾನ ಹಕ್ಕುಗಳಿಲ್ಲ. ಅವರು ತಮ್ಮ ತಂದೆಯ ಆಸ್ತಿಯನ್ನು ಆನುವಂಶೀಯವಾಗಿ ಪಡೆಯಲು ಸಾಧ್ಯವಿಲ್ಲ. ಮಹಿಳೆಯರು ಸಮಾನ ಹಕ್ಕುಗಳನ್ನು ಅನುಭವಿಸಬೇಕಾದರೆ ಯುಸಿಸಿ ಜಾರಿ ಅಗತ್ಯವಾಗಿದೆ' ಎಂದು 63 ವರ್ಷದ ಲೇಖಕಿ ಅಭಿಪ್ರಾಯಪಟ್ಟಿದ್ದಾರೆ.
ತಸ್ಲಿಮಾ ಅವರ 'ದ್ವಿಖಂಡತಾ' ಪುಸ್ತಕದ (2003) ಕಾರಣ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಕಾರಣದಿಂದ 2007ರಲ್ಲಿ ಅಂದಿನ ಪಶ್ಚಿಮ ಬಂಗಾಳ ಸರ್ಕಾರ ಒತ್ತಾಯ ಪೂರ್ವಕವಾಗಿ ಕೋಲ್ಕತ್ತದಿಂದ ಹೊರಹೋಗುವಂತೆ ತಸ್ಲಿಮಾ ಅವರಿಗೆ ಹೇಳಿತ್ತು. 2003ರಲ್ಲಿಯೇ ಪುಸ್ತಕವನ್ನು ಸರ್ಕಾರ ನಿಷೇಧಿಸಿತ್ತು.

