ನವದೆಹಲಿ/ಜಿನೆವಾ: ಜಾಗತಿಕ ಲಿಂಗತ್ವ ಸಮಾನತೆಯ ಸೂಚ್ಯಂಕದಲ್ಲಿ ಭಾರತವು 131ನೇ ಸ್ಥಾನವನ್ನು ಪಡೆದುಕೊಂಡಿದೆ. ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್ ಹಾಗೂ ನಾರ್ವೆ ದೇಶವು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.
ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್) ಬುಧವಾರ ಬಿಡುಗಡೆ ಮಾಡಿರುವ ಲಿಂಗತ್ವ ಅಂತರ ಸೂಚ್ಯಂಕ ವರದಿ ಪ್ರಕಾರ, 145 ದೇಶಗಳ ಪೈಕಿ ಪಪುವಾ ನ್ಯೂ ಗಿನಿಯಾ, ಕುವೈತ್, ಒಮಾನ್, ಕತಾರ್, ತಜಿಕಿಸ್ತಾನ್, ಸೌದಿ ಅರೇಬಿಯಾ, ಈಜಿಪ್ಟ್, ಮೊರೊಕ್ಕೊ, ಮಾಲಿ, ಅಲ್ಜೀರಿಯಾ ಹಾಗೂ ಕಾಂಗೊ ದೇಶಗಳು ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿವೆ. ಭಾರತವು ಕಳೆದ ವರ್ಷವೂ 131ನೇ ಸ್ಥಾನದಲ್ಲೇ ಇತ್ತು.
ಸೂಚ್ಯಂಕದಲ್ಲಿ ಚಾಡ್ ದೇಶವು ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕೊನೆಯ ಮೂರು ಸ್ಥಾನಗಳಲ್ಲಿ ಇರಾನ್ ಹಾಗೂ ಪಾಕಿಸ್ತಾನವಿದೆ.
ಜಿನಿವಾ ಮೂಲದ ಡಬ್ಲ್ಯುಇಎಫ್ ಪ್ರಕಾರ, 2006ರಿಂದಲೂ ಲಿಂಗ ಸಮಾನತೆ ವರದಿ ತಯಾರಿಕೆ ಆರ್ಥಿಕ ಸ್ಥಿತಿಗತಿಯ ಕುರಿತಂತೆ ನಿಗಾ ವಹಿಸಿದೆ. ಪೂರ್ಣ ಪ್ರಮಾಣದ ಲಿಂಗ ಸಮಾನತೆಯು ಈಗಲೂ 120 ವರ್ಷಗಳ ಹಿಂದೆಯೇ ಉಳಿದಿದೆ ಎಂದು ತಿಳಿಸಿದೆ.
ವರದಿಯ ಮುಖ್ಯಾಂಶಗಳು
* ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ಹೊಂದಿರುವ ಭಾರತದಲ್ಲಿ ಲಿಂಗ ಸಮಾನತೆಯು ಶೇ 64.5ರಷ್ಟಿದೆ. ಜಾಗತಿಕ ಸರಾಸರಿಗಿಂತಲೂ ಕಡಿಮೆ
* ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ. ಸೂಚ್ಯಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ
* 2006ರಿಂದಲೂ ಹೋಲಿಸಿದರೆ ಶೈಕ್ಷಣಿಕ ಸಾಧನೆಯಿಂದ ಭಾರತದ ಲಿಂಗ ಸಮಾನತೆ ಪ್ರಮಾಣ ಶೇ 4.3ರಷ್ಟು ಏರಿಕೆ
* ಆರ್ಥಿಕ ಪಾಲ್ಗೊಳ್ಳುವಿಕೆ ಹಾಗೂ ಅವಕಾಶಗಳ ಉಪಸೂಚ್ಯಂಕದಲ್ಲಿ ಭಾರತವು ಶೇ 41.2 ಅಂಕ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 0.5 ಅಂಕ ಹೆಚ್ಚು
* ವೃತ್ತಿಪರ ಹಾಗೂ ತಾಂತ್ರಿಕ ಕೆಲಸಗಾರರ ಲಿಂಗ ಸಮಾನತೆಯಲ್ಲಿ 2006ಕ್ಕೆ ಹೋಲಿಸಿದರೆ ದ್ವಿಗುಣ; 2006ರಲ್ಲಿ 26.6ರಷ್ಟಿದ್ದರೆ 2026ಕ್ಕೆ 49.9ರಷ್ಟಿದೆ
* ಶಾಸಕಾಂಗ ಹಿರಿಯ ಅಧಿಕಾರಿಗಳ ವಲಯದಲ್ಲಿ 2006ಕ್ಕೆ ಹೋಲಿಸಿದರೆ ಶೇ 10ರಷ್ಟು ಅಂಕ ಹೆಚ್ಚಳ
* ಕಾರ್ಮಿಕ ವಲಯ ಪಾಲ್ಗೊಳ್ಳುವಿಕೆ ಪ್ರಮಾಣವು ಕಳೆದೆರಡು ದಶಕದಲ್ಲಿ ಸ್ವಲ್ಪ ಏರಿಕೆಯಾಗಿದ್ದು ಶೇ 44.1ರಷ್ಟು ತಲುಪಿದೆ
* ಶೈಕ್ಷಣಿಕ ಸಾಧನೆ ಉಪಸೂಚ್ಯಂಕದಲ್ಲಿ ಭಾರತವು ಶೇ 96.6ರಷ್ಟು ಲಿಂಗ ಸಮಾನತೆಯನ್ನು ಸಾಧಿಸಿದೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ 0.5ರಷ್ಟು ಹಿನ್ನಡೆ ಕಂಡಿದೆ
* ಆರೋಗ್ಯ ಹಾಗೂ ಬದುಕುಳಿವಿಕೆಯಲ್ಲಿ ಭಾರತವು ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಣೆ ಸಾಧಿಸಿದ್ದು ಶೇ 95.6ರಷ್ಟು ಲಿಂಗ ಸಮಾನತೆ ಸಾಧಿಸಿದೆ
* ಸಂಸತ್ತಿನಲ್ಲಿ ಲಿಂಗ ಸಮಾನತೆಯ ಅಂತರ ಶೇ 16.1ರಷ್ಟಿದೆ. 2006ಕ್ಕೆ ಹೋಲಿಸಿದರೆ ಶೇ 7ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

