ಬ್ರಸೆಲ್ಸ್: 13 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ, ಆನ್‌ಲೈನ್ ಗೇಮ್ ಮತ್ತು ಚಾಟ್‌ಬಾಟ್ ಬಳಕೆನ್ನು ನಿಷೇಧಿಸುವ ಕುರಿತು ಐರೋಪ್ಯ ಆಯೋಗದ (ಇ.ಸಿ) ಅಧ್ಯಕ್ಷೆ ಉರ್ಸುಲಾ ಫಾಂಡರ್ ಲೇಯನ್ ಅವರು ಪ್ರಸ್ತಾಪಿಸಿದ್ದಾರೆ.
ಐರೋಪ್ಯ ಒಕ್ಕೂಟದಲ್ಲಿ ಬುಧವಾರ ವಾರ್ಷಿಕ ಭಾಷಣ ಮಾಡಿದ ಅವರು, 'ದೈತ್ಯ ತಂತ್ರಜ್ಞಾನ ಕಂಪನಿಗಳ (ಬಿಗ್ ಟೆಕ್) ಶಕ್ತಿ ಅಗಾಧವಾದದ್ದು ಮತ್ತು ಅವುಗಳನ್ನು ಹಿಂದಕ್ಕೆ ನೂಕುವುದು ಅಸಾಧ್ಯ ಎಂಬುದು ಅನೇಕರ ಗ್ರಹಿಕೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ' ಎಂದರು.
'ವ್ಯಸನಕಾರಿ ಗುಣಲಕ್ಷಣಗಳನ್ನು ನಾವು ಒಪ್ಪಿಕೊಳ್ಳಬೇಕಿಲ್ಲ. ಮಕ್ಕಳು ಇನ್ನಷ್ಟು ಅತಿರೇಕದ ಕಂಟೆಂಟ್‌ಗಳತ್ತ ಸೆಳೆಯಲ್ಪಡುವುದನ್ನು ಒಪ್ಪಿಕೊಳ್ಳಬೇಕಿಲ್ಲ. ಕೃತಕ ಬುದ್ಧಿಮತ್ತೆ ಪ್ರೇರಿತ ಲೈಂಗಿಕ ಚಿತ್ರಗಳಿಗಾಗಿ ತಮ್ಮ ಫೋಟೊಗಳನ್ನು ಬಳಸುವುದನ್ನು ಹೆಣ್ಣುಮಕ್ಕಳು ಒಪ್ಪಿಕೊಳ್ಳಬೇಕಿಲ್ಲ' ಎಂದು ಪ್ರತಿಪಾದಿಸಿದರು.
'13-15 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಕಣ್ಗಾವಲಿನಲ್ಲಿ ಸಣ್ಣ ಖಾತೆಗಳನ್ನು (ಮಿನಿ ಅಕೌಂಟ್) ಅನುಮತಿಸಬಹುದು' ಎಂದೂ ಹೇಳಿದ್ದಾರೆ. ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಈ ಪ್ರಸ್ತಾಪದ ಕುರಿತು ಮತ ಚಲಾಯಿಸಲಿವೆ.
ತಂತ್ರಜ್ಞಾನದ ಬಗೆಗೆ ಐರೋಪ್ಯ ರಾಷ್ಟ್ರಗಳ ನಿಯಮಗಳನ್ನು ದೀರ್ಘ ಕಾಲದಿಂದ ಟೀಕಿಸುತ್ತ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ವಿಚಾರವು ತಲೆನೋವು ಉಂಟುಮಾಡಬಹುದು ಎನ್ನಲಾಗಿದೆ.

