ಜಕಾರ್ತ: ಇಂಡೊನೇಷ್ಯಾದ ಜಾವಾ ಸಮುದ್ರದಲ್ಲಿ, 240 ಮಂದಿ ಇದ್ದ ಪ್ರಯಾಣಿಕರ ದೋಣಿಯೊಂದು ಪ್ರತಿಕೂಲ ಹವಾಮಾನದಿಂದಾಗಿ ಮಗುಚಿದ್ದು, 140 ಮಂದಿ ಕಾಣೆಯಾಗಿದ್ದಾರೆ. ಈವರೆಗೆ 102 ಮಂದಿಯನ್ನು ರಕ್ಷಿಸಲಾಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ.
ದೋಣಿಯು ಪೂರ್ವ ಜಾವಾದಿಂದ ಸೌತ್ ಕಾಲಿಮಂಟನ್ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಶನಿವಾರ ರಾತ್ರಿ 2 ಗಂಟೆಗೆ ಘಟನೆ ನಡೆದಿದೆ.
ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರದಲ್ಲಿ 10 ಅಡಿ ಎತ್ತರದವರೆಗೂ ಅಲೆಗಳು ಏಳುತ್ತಿವೆ. ಸಮುದ್ರದಲ್ಲಿ ಪ್ರಕ್ಷುಬ್ಧ ಸ್ಥಿತಿ ಇದೆ ಎಂದು ದೋಣಿ ಮಗುಚುವ ಮುನ್ನ, ಅದರ ಕ್ಯಾಪ್ಟನ್ ವರದಿ ಮಾಡಿದ್ದರು. ಬಳಿಕ ದೋಣಿ ಮಗುಚಿರುವ ಮಾಹಿತಿ ಸಿಕ್ಕಿತು ಎಂದು ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥರು ತಿಳಿಸಿದರು.

