ನವದೆಹಲಿ: ರಾಷ್ಟ್ರಗೀತೆಯ ಸಂಪೂರ್ಣ ಅಥವಾ ಕೆಲವು ಸಾಲುಗಳನ್ನು ಹಾಡದಿರುವುದು ಒಬ್ಬ ವ್ಯಕ್ತಿಯ ಸ್ವಂತ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಆ ಕಾರಣಕ್ಕಾಗಿ ಆ ವ್ಯಕ್ತಿಗೆ ಯಾವುದೇ 'ಕ್ರಿಮಿನಲ್ ಶಿಕ್ಷೆ' ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಸೆಪ್ಟೆಂಬರ್ 22) ಸ್ಪಷ್ಟಪಡಿಸಿದೆ.
ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸರಳವಾಗಿ ಹೇಳುವುದಾದರೆ, ವೈಯಕ್ತಿಕ ನಂಬಿಕೆಗಳ ಕಾರಣದಿಂದ ವಂದೇ ಮಾತರಂ ಹಾಡಲು ನಿರಾಕರಿಸುವವರು ಯಾವುದೇ ದಂಡನಾತ್ಮಕ ಕ್ರಮಗಳನ್ನು ಎದುರಿಸಬೇಕಾಗಿಲ್ಲ ಎಂದರ್ಥ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು 'ಬಿಜೋಯ್ ಎಮ್ಯಾನುಯೆಲ್' ಪ್ರಕರಣವನ್ನು ಉಲ್ಲೇಖಿಸಿದ್ದು, 1986ರ ಆ ತೀರ್ಪಿನಲ್ಲಿ ಪ್ರತಿಪಾದಿಸಲಾದ ಕಾನೂನು ತತ್ವವು ಈಗಲೂ ಅನ್ವಯಿಸುತ್ತದೆ ಎಂದು ತಿಳಿಸಿದೆ.
ಭಾರತ ಸರ್ಕಾರದ ಇತ್ತೀಚಿನ ತಿದ್ದುಪಡಿಯ ಬಳಿಕ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಇದರನ್ವಯ 'ವಂದೇ ಮಾತರಂ'ಗೆ ರಾಷ್ಟ್ರಗೀತೆ 'ಜನ ಗಣ ಮನ'ದಷ್ಟೇ ಸಮಾನ ಸ್ಥಾನಮಾನ ನೀಡಲಾಗಿದೆ. ಹೊಸ ಕಾನೂನಿನ ಪ್ರಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇವಲ ಮೊದಲ ಎರಡು ಚರಣಗಳಷ್ಟೇ ಅಲ್ಲದೆ, ಇಡೀ 'ವಂದೇ ಮಾತರಂ' ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

►ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ 'ವಂದೇ ಮಾತರಂ' ಪ್ರಕರಣ ಯಾವುದು?
ಮಂಗಳವಾರ ಪ್ರಸಿದ್ಧ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಡಬೇಕೆಂಬ ಸರ್ಕಾರದ ಆದೇಶವು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದಾರೆ. ಏಕೆಂದರೆ, ಈ ಗೀತೆಯ ಕೊನೆಯ ನಾಲ್ಕು ಚರಣಗಳು ಸ್ಪಷ್ಟವಾದ ಹಿಂದೂ ಧಾರ್ಮಿಕ ಉಲ್ಲೇಖಗಳನ್ನು ಹೊಂದಿವೆ.
"ಪರಿಣಾಮವಾಗಿ, ಈ ಸರ್ಕಾರಿ ಆದೇಶವು ಕೇವಲ ರಾಷ್ಟ್ರೀಯ ಶಿಷ್ಟಾಚಾರವನ್ನು ನಿಯಂತ್ರಿಸುವುದಿಲ್ಲ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಡ್ಡಾಯ ನಿಯಮಾವಳಿಯನ್ನು ರೂಪಿಸುವುದಿಲ್ಲ. ಬದಲಿಗೆ, ಇದು ಕೊನೆಯ ನಾಲ್ಕು ಚರಣಗಳಲ್ಲಿ (3ರಿಂದ 6ನೇ ಚರಣ) ದೇವರನ್ನು ಸ್ತುತಿಸುವ ಹಾಗೂ ಧಾರ್ಮಿಕ ಅಂಶಗಳನ್ನು ಹೊಂದಿರುವ ಒಂದು ಚಿಹ್ನೆಗೆ ಎಲ್ಲರೂ ಒಪ್ಪಿಗೆ ಸೂಚಿಸುವಂತೆ ಬಲವಂತ ಮಾಡುತ್ತದೆ" ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
"ಎಲ್ಲಾ ಆರು ಚರಣಗಳನ್ನು ಕ್ರಿಮಿನಲ್ ಶಿಕ್ಷೆಯ ಭಯದೊಂದಿಗೆ ಕಡ್ಡಾಯಗೊಳಿಸುವುದರಿಂದ, ವಿವಾದಾತ್ಮಕ ಐತಿಹಾಸಿಕ ಸಂಕೇತವೊಂದನ್ನು ಸರ್ಕಾರವು ಬಲವಂತದ ನಂಬಿಕೆಯನ್ನಾಗಿ ಪರಿವರ್ತಿಸುತ್ತಿದೆ" ಎಂದು ಕೃಷ್ಣ ಅವರ ಅರ್ಜಿಯಲ್ಲಿ ವಾದಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಜುಲೈ ತಿಂಗಳಲ್ಲಿ 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆ, 1971'ರ ಸೆಕ್ಷನ್ 3ಕ್ಕೆ ತಿದ್ದುಪಡಿ ತಂದ ನಂತರ ಟಿ.ಎಂ. ಕೃಷ್ಣ ಈ ಅರ್ಜಿ ಸಲ್ಲಿಸಿದ್ದಾರೆ. ತಿದ್ದುಪಡಿಗೊಂಡ ಹೊಸ ಕಾನೂನು, ರಾಷ್ಟ್ರಗೀತೆ 'ಜನ ಗಣ ಮನ'ಕ್ಕೆ ನೀಡಲಾಗಿರುವ ಕಾನೂನು ರಕ್ಷಣೆಯನ್ನೇ 'ರಾಷ್ಟ್ರೀಯ ಗೀತೆ' ವಂದೇ ಮಾತರಂಗೂ ವಿಸ್ತರಿಸಿದೆ. ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅದನ್ನು ಹಾಡುತ್ತಿರುವ ಸಭೆಗೆ ಅಡ್ಡಿಪಡಿಸುವುದು ಈ ಕಾಯ್ದೆಯ ಪ್ರಕಾರ ಅಪರಾಧವಾಗಿದೆ.
ತಿದ್ದುಪಡಿಗೊಂಡ ಸೆಕ್ಷನ್ 3ರ ಪ್ರಕಾರ, ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವವರಿಗೆ ಅಥವಾ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ, ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
►ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
ಈ ಕುರಿತು ವಾದ-ಪ್ರತಿವಾದ ಆಲಿಸುವಾಗ, ನ್ಯಾಯಮೂರ್ತಿ ಬಾಗ್ಚಿ ಅವರು, "ಯಾವುದು ರಾಷ್ಟ್ರೀಯ ಗೀತೆ ಎಂಬುದು ವಿವಾದದಲ್ಲಿಲ್ಲ. ರಾಷ್ಟ್ರೀಯ ಗೀತೆ ಯಾವುದು, ಅದು ಎರಡು ಚರಣಗಳಿರಬೇಕೋ ಅಥವಾ ನಾಲ್ಕು ಚರಣಗಳಿರಬೇಕೋ ಎಂಬುದನ್ನು ನಿರ್ಧರಿಸಿ, ಜನರಿಂದ ಆಯ್ಕೆಯಾದ ಸರ್ಕಾರವೇ ಆಶೋತ್ತರಗಳಿಗೆ ತಕ್ಕಂತೆ ತೀರ್ಮಾನಿಸಬೇಕು. ಆದರೆ ಯಾರೂ ಕೂಡ ವಿಧಿ 25 ಮತ್ತು 26 ಅನ್ನು (ಧಾರ್ಮಿಕ ಸ್ವಾತಂತ್ರ್ಯ) ಉಲ್ಲಂಘಿಸುವಂತಿಲ್ಲ ಅಥವಾ ತಮ್ಮ ಸ್ವಂತ ನಂಬಿಕೆ ಹಾಗೂ ವಿವೇಚನೆಯ ಕಾರಣದಿಂದ ಹಾಡಲು ನಿರಾಕರಿಸುವವರನ್ನು ಕ್ರಿಮಿನಲ್ ಶಿಕ್ಷೆಗೆ ಗುರಿಪಡಿಸುವಂತಿಲ್ಲ. ರಾಷ್ಟ್ರೀಯ ಗೀತೆಯ ಒಂದೋ ಅಥವಾ ಎಲ್ಲಾ ಚರಣಗಳನ್ನು ಹಾಡುವುದು ಆಯಾ ವ್ಯಕ್ತಿಯ ಸ್ವಂತ ವಿವೇಚನೆಗೆ ಬಿಟ್ಟಿದ್ದು, ಅದಕ್ಕಾಗಿ ಅವರನ್ನು ಯಾವುದೇ ಕ್ರಿಮಿನಲ್ ಮೊಕದ್ದಮೆಗೆ ಒಳಪಡಿಸುವಂತಿಲ್ಲ.
"ಬಿಜೋಯ್ ಎಮ್ಯಾನುಯೆಲ್ ಪ್ರಕರಣದಲ್ಲಿ ಈ ನ್ಯಾಯಾಲಯವು ಘೋಷಿಸಿರುವ ಕಾನೂನು ಈ ಕಾಯ್ದೆಗೂ ಅನ್ವಯಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ರಾಷ್ಟ್ರೀಯ ಗೀತೆ ಯಾವುದು ಎಂಬ ಬಗ್ಗೆ ಯಾವುದೇ ವಿವಾದವಿಲ್ಲ. ಬಿಜೋಯ್ ಎಮ್ಯಾನುಯೆಲ್ ತೀರ್ಪಿನಲ್ಲಿ ನೀಡಲಾದ ಕಾನೂನು ತತ್ವವನ್ನು ಇಲ್ಲಿಯವರೆಗೆ ಯಾರೂ ಪ್ರಶ್ನಿಸಿಲ್ಲ" ಎಂದು ಹೇಳಿದ್ದಾರೆ.
►ಸುಪ್ರೀಂ ಕೋರ್ಟ್ ಉಲ್ಲೇಖಿಸಿದ 'ಬಿಜೋಯ್ ಎಮ್ಯಾನುಯೆಲ್' ತೀರ್ಪು ಯಾವುದು?
ವಂದೇ ಮಾತರಂ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ 'ಬಿಜೋಯ್ ಎಮ್ಯಾನುಯೆಲ್' ತೀರ್ಪನ್ನು ಉಲ್ಲೇಖಿಸಿತು. ಇದು 1986ರ ಕಾಲಘಟ್ಟದ ಪ್ರಕರಣವಾಗಿದ್ದು, ಕೇರಳದ ಮೂವರು ಮಕ್ಕಳಿಗೆ ರಾಷ್ಟ್ರಗೀತೆ ಹಾಡುವುದರಿಂದ ವಿನಾಯಿತಿ ಮತ್ತು ರಕ್ಷಣೆ ನೀಡಲಾಗಿತ್ತು.
ಈ ಎಲ್ಲದರ ಆರಂಭವಾಗಿದ್ದು 1985ರ ಜುಲೈನಲ್ಲಿ. ಕೇರಳದ 'ಯೆಹೋವನ್ಸ್ ವಿಟ್ನೆಸೆಸ್' (Jehovah's Witnesses) ಪಂಥಕ್ಕೆ ಸೇರಿದ ಬಿಜೋಯ್, ಬಿನು ಮೋಲ್ ಮತ್ತು ಬಿಂದು ಎಮ್ಯಾನುಯೆಲ್ ಎಂಬ ಮೂವರು ಮಕ್ಕಳನ್ನು ಕೇರಳದ ಶಾಲೆಯೊಂದರಿಂದ ಹೊರಹಾಕಲಾಗಿತ್ತು.
ಕೇರಳದ ಹಿಂದೂ ಸಂಘಟನೆಯಾದ ನಾಯರ್ ಸರ್ವಿಸ್ ಸೊಸೈಟಿ (NSS) ನಿರ್ವಹಿಸುತ್ತಿದ್ದ ಎನ್‌ಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದ ಈ ಮಕ್ಕಳು, ಶಾಲೆಯ ಪ್ರಾರ್ಥನಾ ಸಭೆಯಲ್ಲಿ ರಾಷ್ಟ್ರಗೀತೆ ಹಾಡಲಿಲ್ಲ ಎಂಬ ದೂರಿನ ಮೇರೆಗೆ ಅವರನ್ನು ಶಾಲೆಯಿಂದ ಹೊರಹಾಕಲಾಗಿತ್ತು.
ಈ ಮಕ್ಕಳ ಪೋಷಕರಾದ ವಿ.ಜೆ. ಎಮ್ಯಾನುಯೆಲ್ ಮತ್ತು ಲಿಲ್ಲಿಕುಟ್ಟಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. 'ಯೆಹೋವನ್ಸ್ ವಿಟ್ನೆಸೆಸ್' ಪಂಥವು ಯೆಹೋವನನ್ನು (ದೇವರ ಹೀಬ್ರೂ ಹೆಸರಿನ ಒಂದು ರೂಪ) ಮಾತ್ರ ಪೂಜಿಸಲು ಅನುಮತಿಸುತ್ತದೆ. ರಾಷ್ಟ್ರಗೀತೆಯು ಒಂದು ಪ್ರಾರ್ಥನೆಯಂತಿರುವುದರಿಂದ, ಮಕ್ಕಳು ಗೌರವಯುತವಾಗಿ ಎದ್ದು ನಿಲ್ಲಬಹುದೇ ಹೊರತು ಹಾಡಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಹೈಕೋರ್ಟ್ ನಲ್ಲಿ ತಮಗೆ ನ್ಯಾಯ ಸಿಗದಿದ್ದಾಗ, ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಆಗ ಸುಪ್ರೀಂ ಕೋರ್ಟ್ ಕೇರಳ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಅಲ್ಲದೆ, ದೈನಂದಿನ ರಾಷ್ಟ್ರಗೀತೆಯ ವೇಳೆ ಮೌನವಾಗಿ ಗೌರವಯುತವಾಗಿ ನಿಂತಿದ್ದಕ್ಕಾಗಿ ಶಾಲೆಯಿಂದ ಹೊರಹಾಕಲ್ಪಟ್ಟಿದ್ದ ಮೂವರು ಮಕ್ಕಳನ್ನು ಮರುಪ್ರವೇಶಿಸುವಂತೆ ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡಿತು.
ಅವಮಾನ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯ, ರಾಷ್ಟ್ರಗೀತೆ ಪ್ರಸ್ತುತಪಡಿಸುವಾಗ ಮೌನವಾಗಿ ಎದ್ದು ನಿಲ್ಲುವುದೊಂದೇ ಅದಕ್ಕೆ ಸಲ್ಲಿಸಬೇಕಾದ ಸರಿಯಾದ ಗೌರವ ಎಂದಿತು. "ಯಾರೂ ಕೂಡ ರಾಷ್ಟ್ರಗೀತೆ ಹಾಡಲೇಬೇಕು ಎಂದು ಕಡ್ಡಾಯಗೊಳಿಸುವ ಯಾವುದೇ ಕಾನೂನಿನ ಅವಕಾಶವಿಲ್ಲ. ರಾಷ್ಟ್ರಗೀತೆ ಹಾಡುವಾಗ ಯಾರು ಗೌರವಯುತವಾಗಿ ಎದ್ದು ನಿಲ್ಲುತ್ತಾರೋ, ಅವರು ಆ ಗಾಯನದೊಂದಿಗೆ ಧ್ವನಿಗೂಡಿಸದಿದ್ದಲ್ಲಿ ಅದು ರಾಷ್ಟ್ರಗೀತೆಗೆ ಮಾಡಿದ ಅವಮಾನವಾಗುತ್ತದೆ ಎಂದು ನಾವು ಭಾವಿಸುವುದಿಲ್ಲ" ಎಂದು ನ್ಯಾಯಪೀಠ ತಿಳಿಸಿತು.
ಮಕ್ಕಳ ಸ್ವಂತ ನಂಬಿಕೆ ಹಾಗೂ ಧಾರ್ಮಿಕ ವಿಶ್ವಾಸದ ಕಾರಣಕ್ಕಾಗಿ ಅವರನ್ನು ಶಾಲೆಯಿಂದ ಹೊರಹಾಕಿರುವುದು, ಅವರ "ಸ್ವಂತ ನಂಬಿಕೆ ಹಾಗೂ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ" ಉಲ್ಲಂಘನೆಯಾಗಿದೆ. ಇದು ಅವರ ಧರ್ಮವನ್ನು ಮುಕ್ತವಾಗಿ ನಂಬಲು, ಆಚರಿಸಲು ಮತ್ತು ಪ್ರಚಾರ ಮಾಡಲು ಇರುವ ಹಕ್ಕಿಗೆ ಮಾಡಿದ ಧಕ್ಕೆಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದ ಬಳಿಕ, ಆ ಮೂವರು ಮಕ್ಕಳು ಮರಳಿ ಶಾಲೆಗೆ ಹೋದರು. ಆದರೆ ಅದು ಕೇವಲ ಒಂದೇ ಒಂದು ದಿನಕ್ಕೆ ಮಾತ್ರ ಸೀಮಿತವಾಯಿತು. ಆಮೇಲೆ ತಮ್ಮ ಏಳು ಮಕ್ಕಳಲ್ಲಿ ಯಾರಿಗೂ ಔಪಚಾರಿಕ ಶಿಕ್ಷಣವನ್ನು ಮುಂದುವರಿಸದಿರಲು ಎಮ್ಯಾನುಯೆಲ್ ಕುಟುಂಬವು ನಿರ್ಧರಿಸಿತು.
"ನಾನು ಶಾಲೆಯಲ್ಲಿ ಓದಲು ನನ್ನ ಮಕ್ಕಳ ಹಕ್ಕನ್ನು ರಕ್ಷಿಸಲು ಕೋರ್ಟ್ ಗೆ ಹೋಗಿರಲಿಲ್ಲ. 'ಯೆಹೋವನ್ಸ್ ವಿಟ್ನೆಸೆಸ್' ಪಂಥದ ಎಲ್ಲಾ ಸದಸ್ಯರ ಆರಾಧನೆಯ ಸ್ವಾತಂತ್ರ್ಯಕ್ಕಾಗಿಯೇ ನಾನು ಹೋರಾಡಿದ್ದೆ" ಎಂದು ಮಕ್ಕಳ ಅಪ್ಪ ವಿ.ಜೆ. ಎಮ್ಯಾನುಯೆಲ್ ಹೇಳಿರುವುದಾಗಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಉಲ್ಲೇಖಿಸಿತ್ತು.

