ನವದೆಹಲಿ: ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಚುನಾವಣಾ ಆಯೋಗದ ಡಿಜಿಟಲ್ ವೇದಿಕೆ ಇಸಿಐನೆಟ್ ನಿಯೋಜನೆಗೆ ಸಂಬಂಧಿಸಿ ಭಾರತೀಯ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ಆಡಳಿತಾತ್ಮಕ ನಡವಳಿಕೆ ಕುರಿತು ಸ್ವಯಪ್ರೇರಿತವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದೇಶಾದ್ಯಂತದ 2 ಸಾವಿರಕ್ಕೂ ಅಧಿಕ ನಾಗರಿಕರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ರವಿವಾರ ಬಹಿರಂಗಪತ್ರ ಬರೆದಿದ್ದಾರೆ.
ಎಸ್‌ಐಆರ್‌ಗೆ ಸಂಬಂಧಿಸಿ ಹೊಸ ಸತ್ಯಾಂಶಗಳು ಹೊರಬಂದಿರುವುದರಿಂದ, ಆ ಪ್ರಕ್ರಿಯೆ ಬಾಕಿಯಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಕ್ಷಣವೇ ಅದಕ್ಕೆ ತಡೆಯಾಜ್ಞೆ ನೀಡಬೇಕು ಹಾಗೂ ಹಿಂತೆಗೆದುಕೊಳ್ಳಬೇಕು ಮತ್ತು ಎಸ್‌ಐಆರ್ ಕಾನೂನು ಸಿಂಧುತ್ವವನ್ನು ಹಾಗೂ ಕಾರ್ಯವಿಧಾನದ ಸಮಗ್ರತೆಯನ್ನು ಪರಾಮರ್ಶಿಸಲು ಸ್ವತಂತ್ರವಾದ ನ್ಯಾಯಾಂಗ ಪರಾಮರ್ಶೆಯ ಅಗತ್ಯವಿದೆ ಎಂದು ಪತ್ರವು ಪ್ರತಿಪಾದಿಸಿದೆ.
ಮತದಾರ ನೋಂದಣಿ ಸಾಫ್ಟ್ವೇರ್/ ಫಾರಂಗಳಲ್ಲಿ ಏಕಪಕ್ಷೀಯವಾಗಿ ಹಾಗೂ ಅನಧಿಕೃತವಾಗಿ ಬದಲಾವಣೆಗಳನ್ನು ಮಾಡಲಾಗಿರುವ ಬಗ್ಗೆ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಯಬೇಕು. ಸಂವಿಧಾನಾತ್ಮಕ ಕಾರ್ಯವಿಧಾನಗಳನ್ನು ಗಾಳಿಗೆ ತೂರಿದ ಹಾಗೂ ಬಹುಸದಸ್ಯ ಚುನಾವಣಾ ಆಯೋಗದ ಸಾಂವಿಧಾನಿಕ ಆದೇಶಕ್ಕೆ ಅನಾದರವನ್ನು ತೋರಿಸಿದ್ದಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತವಾದ ದಂಡನಾ ಹಾಗೂ ಕಾರ್ಯವಿಧಾನಾತ್ಮಕ ಕ್ರಮವನ್ನು ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಮತದಾರಪಟ್ಟಿ ಸಂಬಂಧಿತ ಸೇವೆಗಳನ್ನು ಒದಗಿಸುವ ಇಸಿಐನೆಟ್ ಸಾಫ್ಟ್‌ವೇರ್ ಪ್ಲ್ಯಾಟ್ಫಾರಂ ಅನ್ನು ಸುಪ್ರೀಂಕೋಟ್ ನೇಮಿಸುವ ಸ್ವತಂತ್ರ ತಜ್ಞರ ಸಮಿತಿಯ ಪರಿಶೋಧನೆಗೊಳಪಡಿಸಬೇಕು ಹಾಗೂ ಸಾಂವಿಧಾನಿಕ ಅಧಿಕಾರಗಳ ಹೊರತಾಗಿ ಇತರ ಯಾವುದೇ ಅಧಿಕಾರಿಗಳಿಗೆ ಈ ಪ್ಲ್ಯಾಟ್ಫಾರಂ ಅನ್ನು ಆಂತರಿಕವಾಗಿ ಪ್ರವೇಶಿಸಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ತಾಂತ್ರಿಕ ತೊಂದರೆಗಳು, ಸಾಫ್ಟ್ವೇರ್ ಸ್ಥಗಿತ ಅಥವಾ ಅನಧಿಕೃತ ಕಾರ್ಯವಿಧಾನಾತ್ಮಕ ಬದಲಾವಣೆಗಳ ಕಾರಣದಿಂದಾಗಿ ಮತದಾರ ಪಟ್ಟಿಯಿಂದ ತೆಗೆದುಹಾಕಲಾಗಿರುವ ಮತದಾರರನ್ನು ಮರುಸೇರ್ಪಡೆಗೊಳಿಸಬೇಕು ಎಂದು ಪತ್ರವು ಬಲವಾಗಿ ಒತ್ತಾಯಿಸಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವದ ತಳಹದಿಯಾಗಿದೆ ಹಾಗೂ ನಮ್ಮ ಸಂವಿಧಾನದ ಮೂಲಭೂತ ಸಂರಚನೆಯಾಗಿವೆ. ಮತದಾರಪಟ್ಟಿಯನ್ನು ಸಂಕ್ಷಿಸುವ ಉದ್ದೇಶದಿಂದ ರೂಪಿಸಲಾದ ಸಾಂವಿಧಾನಿಕ ಸುರಕ್ಷತಾ ಕ್ರಮಗಳು ಆಂತರಿಕವಾಗಿ ರಾಜಿಮಾಡಿಕೊಂಡ ಸಂದರ್ಭ ಪ್ರಜಾಪ್ರಭುತ್ವ ಪ್ರಕ್ರಿಯೆ ಮೇಲೆ ಜನತೆಯ ನಂಬಿಕೆಯನ್ನು ಕಾಪಾಡಲು ನ್ಯಾಯಾಂಗ ಮಧ್ಯಪ್ರವೇಶಿಸುವುದು ಅಗತ್ಯವಾಗಿದೆ ಎಂದು ವರದಿ ಹೇಳಿದೆ.
ದೇಶಾದ್ಯಂತದ ಖ್ಯಾತ ಶಿಕ್ಷಣ ತಜ್ಞರು, ಮಾಜಿ ಉನ್ನತ ಸರ್ವಾಧಿಕಾರಿಗಳು, ನ್ಯಾಯವಾದಿಗಳು, ಪತ್ರಕರ್ತರು, ಬರಹಗಾರರು, ಕಲಾವಿದರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರು ಪತ್ರಕ್ಕೆ ಸಹಿಹಾಕಿದವರಲ್ಲಿ ಸೇರಿದ್ದಾರೆ.
ಸ್ವತಂತ್ರ ಶಿಕ್ಷಣ ತಜ್ಞ ಆದಿತ್ಯ ನಿಗಮ್, ನಿರ್ಮಾಪಕ ಆದಿತ್ಯ ಶಾ, ಅಡ್ಮಿರಲ್ (ನಿವೃತ್ತ) ವಿಷ್ಣು ಭಾಗವತ್, ನಿವೃತ್ತ ಐಎಎಸ್ ಅಧಿಕಾರಿ ಅದಿತಿ ಮೆಹ್ತಾ, ನಿವೃತ್ತ ಐಎಎಸ್ ಅಧಿಕಾರಿ, ಸಾಮಾಜಿಕ ಕಾರ್ಯಕರ್ತರಾದ ಅಮೃತಾ ಜೋಹ್ರಿ ಹಾಗೂ ಅಂಜಲಿ ಭಾರದ್ವಾಜ್, ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಅನಿತಾ ರಾಮಪಾಲ್, ಪ್ರೊಫೆಸರ್‌ಗಳಾದ ಮೃದುಲಾ ಮುಖರ್ಜಿ, ಗೌಹರ್ ರಝಾ, ಶಬ್ನಮ್ ಹಾಶ್ಮಿ ಪತ್ರಕ್ಕೆ ಸಹಿಹಾಕಿರುವವಲ್ಲಿ ಸೇರಿದ್ದಾರೆ.

