ಕೋಲ್ಕತಾ: ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳತ್ತ ಪದೇ ಪದೇ ಸ್ನೇಹಹಸ್ತ ಚಾಚಿದ್ದಾರೆ. ಇತ್ತೀಚಿಗೆ ಉಭಯ ಪಕ್ಷಗಳ ಕೇಂದ್ರ ನಾಯಕತ್ವವನ್ನೂ ಸಂಪರ್ಕಿಸಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಹೋರಾಟದಲ್ಲಿ ಮಮತಾರ ತೃಣಮೂಲ ಕಾಂಗ್ರೆಸ್ ಬಣದೊಂದಿಗೆ ಗುರುತಿಸಿಕೊಳ್ಳಲು ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರು ಆಸಕ್ತಿಯನ್ನು ಹೊಂದಿಲ್ಲ.
ದಿಲ್ಲಿಯಲ್ಲಿ ಬುಧವಾರ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಸಿಪಿಎಂ, ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಾಯಕರೊಂದಿಗೆ ಮಮತಾ ಕೂಡ ಪಾಲ್ಗೊಳ್ಳುವ ಸಾಧ್ಯತೆಯಿದೆ.
ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರವಿವಾರ ಮಮತಾರ ರಾಜಕೀಯ ಅವಕಾಶವಾದವನ್ನು ಟೀಕಿಸಿದ್ದು, ಅವರು ಹಿಂದೆ ಕಾಂಗ್ರೆಸ್ ಬಿಟ್ಟು ಟಿಎಂಸಿ ಕಟ್ಟಿದ್ದನ್ನು, ಸಿಪಿಎಂ ಅನ್ನು ವಿರೋಧಿಸಿ ತನ್ನ ರಾಜಕೀಯ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದನ್ನು ಮತ್ತು ಅಂತಿಮವಾಗಿ ಎಡರಂಗ ಸರಕಾರವನ್ನು ಪದಚ್ಯುತಗೊಳಿಸಿದ್ದನ್ನು ನೆನಪಿಸಿದ್ದಾರೆ.
ಮಮತಾ ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ ಈ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿರುವ ಈ ಪಕ್ಷಗಳ ರಾಜ್ಯ ನಾಯಕರು ಚುನಾವಣಾ ಆಯೋಗವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಬಿಜೆಪಿ ಹುನ್ನಾರದ ವಿರುದ್ಧ ದೇಶಾದ್ಯಂತ ಜಂಟಿ ಅಭಿಯಾನಕ್ಕಾಗಿ ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಕ್ಷದ ಆಡಳಿತಕ್ಕೆ ಸವಾಲು ಹಾಕಲು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಟಿಎಂಸಿಯೊಂದಿಗೆ ಕೈಜೋಡಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಅವರು ಸುಳಿವು ನೀಡಿದ್ದಾರೆ.
ಬಿಜೆಪಿಯ ಕೋಮುವಾದಿ ರಾಜಕಾರಣದ ವಿರುದ್ಧ ನಿರಂತರವಾಗಿ ಹೋರಾಡುವುದಾಗಿ ತಿಳಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಲೀಂ, ರಾಷ್ಟ್ರಮಟ್ಟದ ಮೈತ್ರಿಯು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜೊತೆಗೆ ಯಾವುದೇ ಚುನಾವಣಾ ಒಪ್ಪಂದ ಎಂದರ್ಥವಲ್ಲ ಎಂದು ಹೇಳಿದ್ದಾರೆ.
ಟಿಎಂಸಿಯ ಸೋಲಿನ ಬಳಿಕ ಮಮತಾ ಅವರಿಗೆ ಈಗ ಎಲ್ಲರ ಬೆಂಬಲದ ಅಗತ್ಯ ಹೆಚ್ಚಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಆಯೋಗದ ವಿಶೇಷ ತೀವ್ರಪರಿಷ್ಕರಣೆಯ (ಎಸ್‌ಐಆರ್) ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಅಭಿಯಾನಕ್ಕೆ ಮಮತಾ ಬೆಂಬಲ ಸೂಚಿಸಿದ್ದು, ತಾವೆಲ್ಲರೂ ಪಕ್ಷಭೇದವಿಲ್ಲದೆ ಒಟ್ಟಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.
ಆದರೆ ನಂದಿಗ್ರಾಮ ಉಪಚುನಾವಣೆಯ ಸಂದರ್ಭದಲ್ಲಿ ಮಮತಾ ಅವರ ನಡೆಯನ್ನು ಟೀಕಿಸಿರುವ ಅಧಿರ್ ರಂಜನ್ ಚೌಧರಿ, ಅವರು ಅನಿವಾರ್ಯತೆಯಿಂದ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕಾಯಿತು ಎಂದಿದ್ದಾರೆ.
ಕಳೆದ 34 ವರ್ಷಗಳ ಎಡಪಕ್ಷಗಳ ಆಡಳಿತದ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಸಿಪಿಎಂ ಪ್ರಯತ್ನಿಸುತ್ತಿದ್ದು, ಟಿಎಂಸಿಯೊಂದಿಗೆ ಸೇರಿ ಆ ಅವಕಾಶವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ.
ಪಶ್ಚಿಮ ಬಂಗಾಳದ ಮಟ್ಟಿಗೆ ತಾವು 'ಕೋಮುವಾದಿ' ಬಿಜೆಪಿ ಮತ್ತು 'ಭ್ರಷ್ಟ' ಟಿಎಂಸಿ ವಿರುದ್ಧ ಪ್ರತ್ಯೇಕವಾಗಿ ಹೋರಾಟ ಮುಂದುವರಿಸುವುದಾಗಿ ಎಡಪಕ್ಷಗಳ ಮತ್ತು ಕಾಂಗ್ರೆಸ್‌ನ ರಾಜ್ಯ ನಾಯಕರು ಪುನರುಚ್ಚರಿಸಿದ್ದಾರೆ.

