ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಎರಡೂ ಬಣಗಳ ಹೆಸರು ಮತ್ತು ಚುನಾವಣಾ ಚಿಹ್ನೆ ವಿವಾದವನ್ನು ಮೂರು ತಿಂಗಳೊಳಗೆ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿತು.
ಪಕ್ಷದ ಎದುರಾಳಿ ಬಣಗಳ ನಡುವಿನ ವಿವಾದದ ಹಿನ್ನೆಲೆಯಲ್ಲಿ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (AITC) ಹೆಸರು ಮತ್ತು ಅದರ 'ಹೂವು ಮತ್ತು ಹುಲ್ಲು' (Flowers & Grass) ಚುನಾವಣಾ ಚಿಹ್ನೆಯನ್ನು ತಡೆಹಿಡಿಯುವ ಕುರಿತು ಚುನಾವಣಾ ಆಯೋಗವು ಸೆಪ್ಟೆಂಬರ್ 17ರಂದು ಕೈಗೊಂಡಿದ್ದ ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದರು.
ಮೂರು ತಿಂಗಳ ಕಾಲಮಿತಿಯು ಇಂದಿನಿಂದ ನಾಲ್ಕು ವಾರಗಳ ಬಳಿಕ ಆರಂಭವಾಗಲಿದೆ. ಈ ಅವಧಿಯಲ್ಲಿ ಎರಡೂ ಬಣಗಳು ಅಗತ್ಯವಿರುವ ಎಲ್ಲ ಪ್ರತಿಕ್ರಿಯೆಗಳು ಮತ್ತು ಸಾಕ್ಷ್ಯಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.
ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ಡು, ಪಕ್ಷದ ಕಾರ್ಯಕರ್ತರಿಂದ 'ಲಕ್ಷಗಟ್ಟಲೆ' ಪ್ರಮಾಣಪತ್ರಗಳು (ಅಫಿಡವಿಟ್ ಗಳು) ಸಲ್ಲಿಕೆಯಾಗುವ ಸಾಧ್ಯತೆ ಇರುವುದರಿಂದ ಚಿಹ್ನೆ ವಿವಾದ ಇತ್ಯರ್ಥಕ್ಕೆ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.
ಚುನಾವಣಾ ಆಯೋಗಕ್ಕೆ ಮೂರು ತಿಂಗಳ ಕಾಲಮಿತಿ ನೀಡುವುದಾದರೆ, ಎರಡೂ ಬಣಗಳು ತಮ್ಮ ಪ್ರಮಾಣಪತ್ರಗಳನ್ನು ಸಲ್ಲಿಸಿದ ದಿನದಿಂದ ಆ ಮೂರು ತಿಂಗಳ ಅವಧಿಯನ್ನು ಲೆಕ್ಕ ಹಾಕಬೇಕು ಎಂದು ನಾಯ್ಡು ವಾದಿಸಿದರು. ಈ ವೇಳೆ, ಈ ಹಿಂದೆ ನಡೆದ ಚಿಹ್ನೆ ವಿವಾದಗಳನ್ನು ಬಗೆಹರಿಸಲು ಚುನಾವಣಾ ಆಯೋಗ ತೆಗೆದುಕೊಂಡಿದ್ದ ಸಮಯದ ವಿವರಗಳನ್ನೂ ಅವರು ನ್ಯಾಯಾಲಯಕ್ಕೆ ನೀಡಿದರು.
ಮಮತಾ ಬ್ಯಾನರ್ಜಿ ನೇತೃತ್ವದ ಬಣವು ಜುಲೈ ತಿಂಗಳಲ್ಲೇ ತನ್ನ ಪ್ರತಿಕ್ರಿಯೆಗಳನ್ನು ಸಲ್ಲಿಸಿದೆ. ಆದರೆ, ಮತ್ತೊಂದು ಬಣ ಇನ್ನೂ ತನ್ನ ಪ್ರತಿಕ್ರಿಯೆಗಳನ್ನು (ಕೌಂಟರ್-ರೆಸ್ಪಾನ್ಸ್) ಸಲ್ಲಿಸಬೇಕಿದೆ ಎಂದು ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಕಲ್ಯಾಣ್ ಬಂಡೋಪಾಧ್ಯಾಯ ನ್ಯಾಯಾಲಯಕ್ಕೆ ತಿಳಿಸಿದರು.
ಮುಂಬರುವ ಉಪಚುನಾವಣೆಗಳಿಗಾಗಿ ಪಕ್ಷದ ಮೂಲ ಗುರುತನ್ನು ತಡೆಹಿಡಿಯುವ ಕುರಿತು ಸೆಪ್ಟೆಂಬರ್ 17ರಂದು ಚುನಾವಣಾ ಆಯೋಗ ಮಧ್ಯಂತರ ಆದೇಶ ಹೊರಡಿಸಿತ್ತು. ಬಳಿಕ ಎರಡು ಎದುರಾಳಿ ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿತ್ತು.
ಆ ಬಳಿಕ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

