ನವದೆಹಲಿ: ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಎಸ್‌ಐಆರ್ ವಿವಾದದ ಕುರಿತು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸೋಮವಾರ ವಿರೋಧ ಪಕ್ಷಗಳು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, "ಸುಳ್ಳನ್ನು ನೂರು ಬಾರಿ ಹೇಳಿದರೂ ಅದು ಸತ್ಯವಾಗುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನೂ ಪ್ರಸ್ತಾಪಿಸಿದ ನಡ್ಡಾ, ದೇಶದ ಸ್ವಾಯತ್ತ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಹಾಗೂ ಅವುಗಳ ಘನತೆಗೆ ಧಕ್ಕೆ ತರಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಡ್ಡಾ, "ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಅವರಿಗೆ ದೇಶದ ಸ್ವಾಯತ್ತ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಹೀಯಾಳಿಸುವುದು ಮತ್ತು ದುರ್ಬಲಗೊಳಿಸುವುದೇ ಏಕೈಕ ಅಜೆಂಡಾವಾಗಿದೆ. ದೇಶದ ಅಭಿವೃದ್ಧಿಯನ್ನು ತಡೆಯಲು ಪ್ರತಿದಿನ ಬೆಳಿಗ್ಗೆ ಹೊಸ ಸಂಚು ರೂಪಿಸುವ ಅದೇ 'ಟೂಲ್ಕಿಟ್ ಮನಸ್ಥಿತಿ' ಇದಾಗಿದೆ. ಆರೋಪ ಮಾಡುವುದು, ದೇಶದ ವಾತಾವರಣವನ್ನು ಹಾಳುಗೆಡವುವುದು ಮತ್ತು ಬಳಿಕ ಓಡಿಹೋಗುವುದು; ಇದುವೇ ವಿರೋಧ ಪಕ್ಷಗಳ ಕಾರ್ಯವೈಖರಿ" ಎಂದು ಹೇಳಿದ್ದಾರೆ.
"ಅವರಿಗೆ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಕಲ್ಯಾಣ ಅಥವಾ ದೇಶದ ಗೌರವ ಮತ್ತು ಪ್ರತಿಷ್ಠೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಜನಸೇವೆ ಮಾಡುವುದಕ್ಕಿಂತ ಕುಟುಂಬ ರಾಜಕಾರಣವನ್ನು ಪೋಷಿಸುವುದು ಮತ್ತು ವೈಯಕ್ತಿಕ ಲಾಭ ಪಡೆಯುವುದೇ ಅವರ ಅಧಿಕಾರದ ಏಕೈಕ ಉದ್ದೇಶವಾಗಿದೆ. ಈ ಹಿಂದೆ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ ಶಕ್ತಿಗಳಿಗೆ ಸಾರ್ವಜನಿಕರೇ ತಕ್ಕ ಪಾಠ ಕಲಿಸಿದ್ದಾರೆ. ಮುಂದೆಯೂ ಜನರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಅವರ ಪ್ರತಿಯೊಂದು ಭ್ರಮೆ ಮತ್ತು ಪಿತೂರಿಗಳು ಜನತಾ ನ್ಯಾಯಾಲಯದಲ್ಲಿ ಧೂಳಿಪಟವಾಗಲಿವೆ" ಎಂದು ಅವರು ಹೇಳಿದರು.
ʼಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆʼ
ಚುನಾವಣಾ ಆಯೋಗವು ಈ ಕುರಿತು ಸ್ಪಷ್ಟನೆ ನೀಡಿದ್ದರೂ ವಿರೋಧ ಪಕ್ಷಗಳು ಆರೋಪಗಳನ್ನು ಮುಂದುವರಿಸುತ್ತಿವೆ ಎಂದು ನಡ್ಡಾ ಹೇಳಿದರು. ದೇಶದಲ್ಲಿ ಗೊಂದಲ ಮೂಡಿಸಲು ಹಾಗೂ ವಾತಾವರಣವನ್ನು ಹದಗೆಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
"ಇಂದು 140 ಕೋಟಿ ನಾಗರಿಕರ ಅವಿರತ ಶ್ರಮದಿಂದ ದೇಶವು 'ವಿಕಸಿತ ಭಾರತ'ದ ಸಂಕಲ್ಪವನ್ನು ಸಾಕಾರಗೊಳಿಸುವತ್ತ ಸಾಗುತ್ತಿರುವಾಗ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಪ್ರತಿಧ್ವನಿಸುತ್ತಿರುವಾಗ, ಕಾಂಗ್ರೆಸ್ ಮತ್ತು ಸಂಪೂರ್ಣ 'ಇಂಡಿಯಾ ಮೈತ್ರಿಕೂಟ' ಈ ಪ್ರಗತಿಯನ್ನು ಕಂಡು ಹತಾಶೆ ಹಾಗೂ ನಿರಾಶೆಗೆ ಒಳಗಾಗಿದೆ" ಎಂದು ಜೆಪಿ ನಡ್ಡಾ ಹೇಳಿದರು.

