ನವದೆಹಲಿ: ಬೋಯಿಂಗ್ 737 MAX ವಿಮಾನಗಳಲ್ಲಿನ ಸಾಫ್ಟ್‌ವೇರ್ ದೋಷವೊಂದು ಪತ್ತೆಯಾಗಿದ್ದು, ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಪರ್ಯಾಯ ಲ್ಯಾಂಡಿಂಗ್ ಪ್ರಕ್ರಿಯೆ ಅನುಸರಿಸುವ ಸಂದರ್ಭದಲ್ಲಿ ಸ್ವಯಂಚಾಲಿತ ಹಾರಾಟ ಮಾರ್ಗದರ್ಶನ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಈ ಸಮಸ್ಯೆ ಭಾರತದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಅಕಾಸಾ ಏರ್ ನಿರ್ವಹಿಸುತ್ತಿರುವ ಒಟ್ಟು 96 ಬೋಯಿಂಗ್ 737 MAX ವಿಮಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸುಮಾರು 53 ಹಾಗೂ ಅಕಾಸಾ ಏರ್ 43 ಬೋಯಿಂಗ್ 737 MAX ವಿಮಾನಗಳನ್ನು ನಿರ್ವಹಿಸುತ್ತಿವೆ.
ವಿಮಾನವು ನಿಗದಿತ ಲ್ಯಾಂಡಿಂಗ್ ಪ್ರಕ್ರಿಯೆಯಂತೆ ಇಳಿಯಲು ಸಾಧ್ಯವಾಗದಿದ್ದರೆ, ಪೈಲಟ್‌ಗಳು 'ಮಿಸ್ಡ್ ಅಪ್ರೋಚ್' ಎಂಬ ಪರ್ಯಾಯ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ಬಳಿಕ ವಿಮಾನಕ್ಕೆ ಹೊಸ ಹಾರಾಟ ಮಾರ್ಗವನ್ನು ನಿಗದಿಪಡಿಸಲಾಗುತ್ತದೆ.
ಈ ಹೊಸ ಮಾರ್ಗವು ವಿಮಾನಕ್ಕೆ ಮೊದಲೇ ನಿಗದಿಪಡಿಸಿದ್ದ ಮಾರ್ಗಕ್ಕಿಂತ ಭಿನ್ನವಾಗಿದ್ದರೆ, ಕೆಲವು 737 MAX ವಿಮಾನಗಳಲ್ಲಿ ಸ್ವಯಂಚಾಲಿತ ಹಾರಾಟ ಮಾರ್ಗದರ್ಶನ ವ್ಯವಸ್ಥೆ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ. ಕಾಕ್‌ಪಿಟ್ ಸಾಫ್ಟ್‌ವೇರ್ ನಲ್ಲಿನ ಸಮಸ್ಯೆಯಿಂದ ಇದು ಸಂಭವಿಸಬಹುದು ಎಂದು ಬೋಯಿಂಗ್ ದಾಖಲೆಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಆದರೆ, ಇದರಿಂದ ವಿಮಾನವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂಬುದಲ್ಲ. ಸ್ವಯಂಚಾಲಿತ ವ್ಯವಸ್ಥೆ ಸ್ಥಗಿತಗೊಂಡರೂ ಪೈಲಟ್‌ಗಳು ವಿಮಾನವನ್ನು ಹಸ್ತಚಾಲಿತವಾಗಿ ನಿಯಂತ್ರಿಸಿ ಹಾರಿಸಬಹುದು.
ಈ ಸಮಸ್ಯೆಯ ಕುರಿತು ಕಳೆದ ತಿಂಗಳೇ ಎಲ್ಲ 737 ವಿಮಾನ ನಿರ್ವಾಹಕರಿಗೆ ಮಾಹಿತಿ ನೀಡಲಾಗಿದೆ ಎಂದು ಬೋಯಿಂಗ್ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿ ಎದುರಾದಾಗ ಪೈಲಟ್‌ಗಳು ಸುರಕ್ಷಿತವಾಗಿ ವಿಮಾನವನ್ನು ನಿಯಂತ್ರಿಸಲು ಈಗಾಗಲೇ ಇರುವ ಕಾರ್ಯವಿಧಾನಗಳನ್ನು ಬಲಪಡಿಸುವ ಮಾಹಿತಿಯನ್ನೂ ವಿಮಾನ ನಿರ್ವಾಹಕರಿಗೆ ನೀಡಲಾಗಿದೆ. ಜತೆಗೆ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಹೊಸ ಸಾಫ್ಟ್‌ವೇರ್ ನವೀಕರಣದ ಕೆಲಸ ನಡೆಯುತ್ತಿದೆ ಎಂದು ಬೋಯಿಂಗ್ ತಿಳಿಸಿದೆ.
'ಮಿಸ್ಡ್ ಅಪ್ರೋಚ್' ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂಚಾಲಿತ ಹಾರಾಟ ವ್ಯವಸ್ಥೆಯನ್ನು ಮರುಹೊಂದಿಸುವಂತೆ ಬೋಯಿಂಗ್, ವಿಮಾನ ನಿರ್ವಾಹಕರಿಗೆ ಸೂಚಿಸಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿದೆ.
ಅಕಾಸಾ ಏರ್ ಬೋಯಿಂಗ್‌ನೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಈ ಸಮಸ್ಯೆಯಿಂದ ತನ್ನ ವಿಮಾನಗಳ ಕಾರ್ಯಾಚರಣೆಯ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ತಿಳಿಸಿದೆ.
ಆದರೆ, ತನ್ನ 43 ಬೋಯಿಂಗ್ 737 MAX ವಿಮಾನಗಳ ಪೈಕಿ ಎಷ್ಟು ವಿಮಾನಗಳು ಈ ದೋಷದಿಂದ ಬಾಧಿತವಾಗಿವೆ ಎಂಬುದನ್ನು ಅಕಾಸಾ ಏರ್ ಸ್ಪಷ್ಟಪಡಿಸಿಲ್ಲ.
ಈ ಕುರಿತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. DGCA ಈ ಸಮಸ್ಯೆಯನ್ನು ಪರಿಶೀಲಿಸುತ್ತಿದೆಯೇ ಅಥವಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಸಲಹೆ ನೀಡಿದೆಯೇ ಎಂಬುದರ ಬಗ್ಗೆಯೂ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.
2025ರ ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಬಳಿಕ ಭಾರತದಲ್ಲಿ ಬೋಯಿಂಗ್ ವಿಮಾನಗಳ ಪರಿಶೀಲನೆ ಮತ್ತು ಸುರಕ್ಷತಾ ತಪಾಸಣೆಗಳು ನಡೆದಿವೆ. ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನಗಳಿಗೆ ಸಂಬಂಧಿಸಿದ ಘಟನೆಗಳ ನಡುವೆಯೇ ಈ ಹೊಸ ಬೆಳವಣಿಗೆ ನಡೆದಿದೆ.

