ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ 'ಕೇರಳ ಕರ್ನಾಟಕ ಜಾನಪದ ಉತ್ಸವ', ಸೆಪ್ಟೆಂಬರ್ 27ರಂದು ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‍ನಲ್ಲಿ ಜರುಗಲಿದೆ. ಇದೇ ಸಂದರ್ಭ ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಪದಾಧಿಕಾರಿಗಳ ಪದಗ್ರಹಣ, ಕೃತಿ ಬಿಡುಗಡೆ, ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮಾಜಿ ಸಚಿವ, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಸಮಾರಂಭ ಉದ್ಘಾಟಿಸುವರು. ಮಾಜಿ ಶಾಸಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಅವರು ಪ್ರಾಸ್ತಾವಿಕ ಭಾಷಣ ಮಾಡುವರು.
ಕೇರಳ ರಾಜ್ಯದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಶಿವರಾಮ ಕೆ. ಭಂಡಾರಿ, ಪ್ರಸನ್ನ ಕುಮಾರ್, ಡಾ.ಸಂದೀಪ್ ಪುರಂದರ ಶೆಟ್ಟಿ, ಎಸ್. ಜಗದೀಶ್ ಚಂದ್ರ ಅಂಚನ್, ಶಾಫಿ ಎಂ.ಬಂಡಸಾಲೆ ಮತ್ತು ರಾಘವ ಚೇರಾಲ್ ಅವರಿಗೆ 'ಸಾಧಕ ರತ್ನ' ಪ್ರಶಸ್ತಿಪ್ರದಾನ ಮಾಡುವರು.
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಅಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಪೆÇ್ರ. ಹಿ.ಚಿ. ಬೋರಲಿಂಗಯ್ಯ ಅವರು ಕೇರಳ ಘಟಕದ ನೂತನ ಸಾರಥಿಗಳ ಪದಗ್ರಹಣ ಘೋಷಿಸುವರು. ಈ ಸಂದರ್ಭ ಲಕ್ಷ್ಮೀ ಮಹೇಶ್ ರಾಜು ಅವರ 'ಇಲ್ಲಿ-ಇಂತು-ಹೀಗೆ' ಕವನ ಸಂಕಲನವನ್ನು ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೈಯುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಕವಯತ್ರಿ ಲಕ್ಷ್ಮಿ ಕೆ. ಅಧ್ಯಕ್ಷತೆಯಲ್ಲಿ ಬಹುಭಾಷಾ 'ಕವಿಗೋಷ್ಠಿ' ನಡೆಯಲಿದೆ.
ಎರ್ನಾಕುಳಂ ಶಾಸಕ ಟಿ.ಜೆ. ವಿನೋದ್, ಕಸಾಪ ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಗಡಿ ಪ್ರಾಧಿಕಾರದ ಸದಸ್ಯರಾದ ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ ಖ್ಯಾಡೇದ್, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಅರಿಬೈಲು ಮೊದಲದವರು ಪಾಲ್ಗೊಳ್ಳುವರು. ಕಾರ್ಯಕ್ರಮದ ಅಂಗವಾಗಿ ವಿವಿಧ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯಮಯ ನಡೆಯುವುದು.



