ಲಾತೂರ್: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ, ಲಾತೂರ್‌ನ ಕೋಚಿಂಗ್ ಸೆಂಟರ್‌ನ ಮಾಲೀಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರ ಪುತ್ರನಿಗೆ ನೀಟ್-ಯುಜಿ ಪರೀಕ್ಷೆ ಬರೆಯದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.
'ಮೋಟೆಗಾಂವ್ಕರ್ ಪುತ್ರ ಆದಿತ್ಯ ಮೋಟೆಗಾಂವ್ಕರ್ 2027ರ ನೀಟ್-ಯುಜಿಗೆ ಹಾಜರಾಗಲು ಅನರ್ಹರು' ಎಂದು ಎನ್‌ಟಿಎ ತಿಳಿಸಿದೆ. ಸದ್ಯ ಶಿವರಾಜ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಶಿವರಾಜ್, ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಪಡೆಯಲು ಪ್ರಾಧ್ಯಾಪಕ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಮಿತಿಯಲ್ಲಿದ್ದ ಪಿ.ವಿ ಕುಲಕರ್ಣಿಗೆ ₹5 ಲಕ್ಷ ಪಾವತಿಸಿದ್ದರು. ಮೋಟೆಗಾಂವ್ಕರ್ ಅವರ ಪುತ್ರ ಕುಲಕರ್ಣಿ ಅವರ ತರಬೇತಿ ತರಗತಿಗೆ ಹಾಜರಾಗಿದ್ದ ಮತ್ತು ಅಲ್ಲೇ ಪ್ರಶ್ನೆಗಳನ್ನು (ಪ್ರಶ್ನೆಪತ್ರಿಕೆ) ಒದಗಿಸಲಾಗಿತ್ತು ಎಂದು ಸಿಬಿಐ ಹೇಳಿದೆ.

