ಚಂಡೀಗಢ: ಕಲಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಕಲಿಯಬೇಕೆಂಬ ಹಂಬಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಹರಿಯಾಣದ 85 ವರ್ಷದ ನಿವೃತ್ತ ಸೈನಿಕ ಲಾಲ್ ಚಂದ್ ಗೋದಾರ ಸಾಬೀತುಪಡಿಸಿದ್ದಾರೆ. 8ನೇ ತರಗತಿಯಲ್ಲಿಯೇ ಓದು ಅರ್ಧಕ್ಕೆ ನಿಲ್ಲಿಸಿ ಸೇನೆ ಸೇರಿದ್ದ ಇವರು, ಇದೀಗ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (GNOU) ಸ್ನಾತಕೋತ್ತರ ಪದವಿ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
3 ಯುದ್ಧಗಳಲ್ಲಿ ಹೋರಾಟ, 76ನೇ ವಯಸ್ಸಿನಲ್ಲಿ ಮತ್ತೆ ಓದು...
1961-62ರಲ್ಲಿ ಭಾರತೀಯ ಸೇನೆ ಸೇರಿದ್ದ ಗೋದಾರ, 1962ರ ಚೀನಾ ವಿರುದ್ಧದ ಯುದ್ಧ ಹಾಗೂ 1965 ಮತ್ತು 1971ರ ಪಾಕಿಸ್ತಾನ ವಿರುದ್ಧದ ಯುದ್ಧಗಳೂ ಸೇರಿದಂತೆ ಒಟ್ಟು ಮೂರು ಯುದ್ಧಗಳಲ್ಲಿ ಹೋರಾಡಿದ್ದಾರೆ. ಆದರೆ, 10ನೇ ತರಗತಿ ಮುಗಿಸದ ಕಾರಣ ಸೇನೆಯಲ್ಲಿ ಅವರಿಗೆ ಬಡ್ತಿ ಸಿಗಲಿಲ್ಲ. ತದನಂತರ ಹರಿಯಾಣ ಸಾರಿಗೆ ಇಲಾಖೆಯಲ್ಲಿ ಯಾರ್ಡ್ ಮಾಸ್ಟರ್ (ಬಸ್‌ಗಳ ಕಾರ್ಯಾಚರಣೆಯ ಮೇಲ್ವಿಚಾರಕ) ಆಗಿ ಸೇವೆ ಸಲ್ಲಿಸಿ, 2002ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲೂ ಭಾಗವಹಿಸಿ ಪದಕಗಳನ್ನೂ ಗೆದ್ದಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಇವರಿಗೆ ಪುಸ್ತಕ ಓದುವ ಆಸಕ್ತಿಯಿತ್ತು. ಆದರೆ ಜೀವನದಲ್ಲೆದುರಾದ ಕಷ್ಟಗಳಿಂದಾಗಿ ಓದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಮುಂದೆ ಮೊಮ್ಮಕ್ಕಳು ನೀಡಿದ ಪ್ರೋತ್ಸಾಹದಿಂದಾಗಿ ತಮ್ಮ 76ನೇ ವಯಸ್ಸಿನಲ್ಲಿ ಮತ್ತೆ ಪುಸ್ತಕ ಹಿಡಿದ ಲಾಲ್ ಚಂದ್ ಗೋದಾರ, 2023ರಲ್ಲಿ ಬಿಎ (BA) ಪದವಿ ಮುಗಿಸಿ, ಇದೀಗ ಪ್ರಥಮ ಪ್ರಯತ್ನದಲ್ಲೇ ಎಂಎ (MA) ಪದವಿಯನ್ನೂ ಪೂರ್ಣಗೊಳಿಸಿದ್ದಾರೆ.
'ನನ್ನ ಅಜ್ಜ ಪ್ರತಿದಿನ ಗಂಟೆಗಟ್ಟಲೆ ಓದುತ್ತಿದ್ದರು. ಅವರಿಗೆ ಕಷ್ಟವಾದಾಗ ನಾನು ಸಹಾಯ ಮಾಡುತ್ತಿದ್ದೆ. ಹೀಗಾಗಿ ಅಜ್ಜ ತಮ್ಮ ಓದನ್ನು ಮುಂದುವರಿಸಲಿ ಎನಿಸಿತು. ಈಗ ಅವರು ಮೊದಲ ಪ್ರಯತ್ನದಲ್ಲೇ ಎಂಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ನನಗೆ ಅವರ ಬಗ್ಗೆ ಅಪಾರ ಹೆಮ್ಮೆ ತಂದಿದೆ' ಎಂದು ಮೊಮ್ಮಗಳು ನವ್ಯಾ ಹೇಳಿದ್ದಾರೆ.
ಯಾವುದೇ ಕೋಚಿಂಗ್ ಪಡೆಯದೆ, ಮನೆಯಲ್ಲೇ ಮೊಮ್ಮಗಳ ಸಹಾಯದಿಂದ ಓದಿ ಪರೀಕ್ಷೆ ಬರೆದಿರುವ ಗೋದಾರ, 'ನಾನು ದೇಶಕ್ಕಾಗಿ ಯುದ್ಧಗಳನ್ನೇ ಮಾಡಿದ್ದೇನೆ, ಓದುವುದು ನನಗೇನೂ ಕಷ್ಟದ ಕೆಲಸವಲ್ಲ' ಎಂದು ನಗೆಚಟಾಕಿ ಹಾರಿಸಿದ್ದಾರೆ.
85ರ ವಯಸ್ಸಿನಲ್ಲೂ ಪ್ರತಿದಿನ ಕಿಲೋಮೀಟರ್‌ಗಟ್ಟಲೆ ನಡೆಯುವ ಹಾಗೂ ಸೈಕಲ್ ಸವಾರಿ ಮಾಡುವ ಗೋದಾರ ಅವರಿಗೆ, ಮುಂದಿನ ದಿನಗಳಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಅಥವಾ ಎಲ್‌ಎಲ್‌ಬಿ (LLB) ಮಾಡುವ ಕನಸಿದೆ ಎನ್ನುತ್ತಾರೆ.

