ಇಂಫಾಲ : ಮಣಿಪುರದಲ್ಲಿ 2023ರ ಮೇನಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ 306 ಜನರು ಹತ್ಯೆಗೀಡಾಗಿದ್ದು, 49 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಗೃಹ ಸಚಿವ ಗೋವಿಂದದಾಸ್ ಕೊಂಥೌಜಮ್ ಗುರುವಾರ ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಗುರುವಾರ ಬಿಜೆಪಿ ಶಾಸಕ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಕೊಂಥೌಜಮ್, 2023ರ ಮೇ 3ರಂದು ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಜನಾಂಗೀಯ ಹಿಂಸಾಚಾರ ಆರಂಭಗೊಂಡಿತ್ತು. 2026ರ ಆಗಸ್ಟ್ 31ರವರೆಗೆ 306 ಮಂದಿ ಮೃತಪಟ್ಟಿದ್ದಾರೆ. 49 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವಿವರಿಸಿದ್ದಾರೆ.
'2023ರ ಮೇ 3ರಂದು ಮೈತೇಯಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ 'ಬುಡಕಟ್ಟು ಐಕ್ಯತಾ ಮೆರವಣಿಗೆ' ನಡೆಸಲಾಗಿತ್ತು. ಇದಾದ ಬಳಿಕ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.
ಮಣಿಪುರದ ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯದವರು ಶೇಕಡ 53ರಷ್ಟಿದ್ದು, ಹೆಚ್ಚಾಗಿ ಇಂಫಾಲ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ, ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡ ಬುಡಕಟ್ಟು ಜನಾಂಗದವರು ಶೇಕಡ 40ರಷ್ಟಿದ್ದಾರೆ.
ವರ್ಷಗಟ್ಟಲೆ ನಡೆದ ಜನಾಂಗೀಯ ಹಿಂಸಾಚಾರದ ಬಳಿಕ 2025ರ ಫೆಬ್ರುವರಿ 9ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ್ದರು. ಬಳಿಕ ಫೆಬ್ರುವರಿ 13ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
ಬಿಜೆಪಿ ನಾಯಕ ವೈ.ಖೇಮ್‌ಚಂದ್ ಸಿಂಗ್ ಅವರು 2026ರ ಫೆಬ್ರುವರಿ 4ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

